ಅಪಘಾತ ಕಂಡಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ ಇಬ್ಬರು ಗ್ರಾಮಸ್ಥರಿಗೆ ಸೇನೆ 5,000 ರೂ ನಗದು ಬಹುಮಾನ ನೀಡಿತು. ಜತೆಗೆ ಸ್ಥಳೀಯರಿಗೆ ಬ್ಲಾಂಕೆಟ್, ಪಡಿತರ ಸಾಮಗ್ರಿಗಳು, ಸೋಲಾರು ತುರ್ತು ದೀಪಗಳನ್ನು ವಿತರಿಸಲಾಯಿತು.
ಈ ಕುರಿತು ಮಾಹಿತಿ ನೀಡಿದ ಜನರಲ್ ಆಫೀಸರ್ ಕಮಾಂಡಿಂಗ್ ಕೇಂದ್ರ ಕಚೇರಿ ದಕ್ಷಿಣ ಭಾರತದ ಲೆಫ್ಟಿನೆಂಟ್ ಜನರಲ್ ಎ ಅರುಣ್, ಹೆಲಿಕಾಪ್ಟರ್ ದುರಂತ ನಡೆದ ಸಂದರ್ಭದಲ್ಲಿ ಗ್ರಾಮಸ್ಥರು ಮಾಡಿರುವ ಸೇವೆ ಅಮೋಘವಾದದ್ದು. ಪ್ರಪಾತದಲ್ಲಿ ಸಿಲುಕಿದ್ದ ನಮ್ಮ ಯೋಧರನ್ನು ರಕ್ಷಿಸುವ ಕಾರ್ಯದಲ್ಲಿ ಅವರು ಸಲ್ಲಿಸಿರುವ ಸೇವೆ, ನಡೆಸಿದ ಕಾರ್ಯಾಚರಣೆಯನ್ನು ಮರೆಯಲು ಸಾಧ್ಯವಿಲ್ಲ. ಗ್ರಾಮಸ್ಥರಿಗೆ ಯಾವ ರೀತಿಯ ಧನ್ಯವಾದ ಸಲ್ಲಿಸಿದರೂ ಕಡಿಮೆಯೇ. ಈ ಹಿನ್ನೆಲೆಯಲ್ಲಿ ಅವರ ಉಪಕಾರವನ್ನು ಸ್ಮರಿಸುವುದಕ್ಕಾಗಿ ಗ್ರಾಮವನ್ನು ದತ್ತು ಪಡೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.