ಬೆಂಗಳೂರು: ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣ ಮಹಿಳೆಯರಿಗೆ ಮಾತ್ರವಾಗಿದ್ದು, ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಗೆ ಬರುವ ಪುರುಷರಿಗೂ ಈ ಯೋಜನೆಯ ಲಾಭ ಸಿಗುವಂತಾಗಲಿದೆ ಎಂಬ ಸುಳಿವು ಸಿಕ್ಕಿದೆ.
ಈಗಾಗಲೇ ಶಕ್ತಿ ಯೋಜನೆಯ ಅನ್ವಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆಯಿದೆ. ಇದನ್ನು ಪುರುಷರಿಗೂ ವಿಸ್ತರಿಸಬೇಕು ಎಂದು ಹಲವರು ಒತ್ತಾಯಿಸಿದ್ದರು. ಕನಿಷ್ಠ ವಿದ್ಯಾರ್ಥಿಗಳಿಗಾದರೂ ನೀಡಿ ಎಂದು ಬೇಡಿಕೆಯಿಟ್ಟಿದ್ದರು.
ಆದರೆ ಆ ರೀತಿ ಮಾಡಿದರೆ ಸರ್ಕಾರಕ್ಕೆ ಭಾರೀ ನಷ್ಟವಾಗಲಿದೆ ಎಂದು ಸಿಎಂ, ಡಿಸಿಎಂ ಈಗಾಗಲೇ ಹೇಳಿದ್ದರು. ಆದರೆ ಈಗ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಡಯಾಲಿಸಿಸ್ ಗೆ ಒಳಗಾಗುತ್ತಿರುವ ರೋಗಿಗಳಿಗೆ ಫ್ರೀ ಬಸ್ ವ್ಯವಸ್ಥೆ ಮಾಡಿಕೊಡಬೇಕೆಂಬ ಸ್ಪೀಕರ್ ಯುಟಿ ಖಾದರ್, ಸಿಎಂಗೆ ಮನವಿ ಸಲ್ಲಿಸಿದ್ದಾರೆ.
ಇದೀಗ ಇದನ್ನು ಸಿಎಂ ಪುರಸ್ಕರಿಸಿದರೆ ಇನ್ನು ಮುಂದೆ ಡಯಾಲಿಸಿಸ್ ಚಿಕಿತ್ಸೆಗೊಳಗಾಗುತ್ತಿರುವ ಪುರುಷರಿಗೂ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಸಿಗಲಿದೆ.