ರಾಷ್ಟ್ರಕವಿ ಕುವೆಂಪು ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ (ಈಗಿನ ಕೊಪ್ಪ) 1904 ಡಿಸೆಂಬರ್ 29 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪೂರೈಸಿ ಪ್ರೌಢಶಾಲಾ ಶಿಕ್ಷಣವನ್ನು ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ನಂತರ ಬಿ.ಎ. ಮತ್ತು ಎಂ.ಎ. ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕಾಣಿಕೆ ಅಪಾರ. ಇಪ್ಪತ್ತನೆಯ ಶತಮಾನದ ದೈತ್ಯ ಪ್ರತಿಭೆ. ಕನ್ನಡದ ಎರಡನೆಯ ರಾಷ್ಟ್ರಕವಿ ಎಂದು ಬಿರುದಾಂಕಿತರಾದ ಕುವೆಂಪು ಅವರು ವಿಶ್ವಮಾನವ ಸಂದೇಶ ನೀಡಿದವರು, ಅಲ್ಲದೇ ಮೊಟ್ಟ ಮೊದಲ ಬಾರಿಗೆ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟವರು.
ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಬರವಣಿಗೆಯ ಶೈಲಿಯ ಮೂಲಕ ನೂರಾರು ಕೃತಿಗಳನ್ನು ರಚಿಸಿರುವ ಇವರು ಅದಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅದರಲ್ಲಿ ಮುಖ್ಯವಾಗಿ ಕರ್ನಾಟಕದಲ್ಲಿ ಸಾಹಿತ್ಯ ಲೋಕಕ್ಕೆ ನೀಡಲಾಗುವ ಕರ್ನಾಟಕ ರತ್ನ, ಹಾಗೂ ಪಂಪ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದವರು ಇದೇ ಕುವೆಂಪುರವರು. ಇವರ ಸೇವೆ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇವರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ನಂತರ ಪ್ರಾಂಶುಪಾಲರೂ ಆಗಿದ್ದರು. ನಂತರ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿಯು ಕಾರ್ಯ ನಿರ್ವಹಿಸಿದ್ದಾರೆ.
ಪ್ರಶಸ್ತಿಗಳು
ಶ್ರೀರಾಮಾಯಣ ದರ್ಶನಂ ಕೃತಿಗೆ 1955 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1956 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಿ.ಲಿಟ್. ಗೌರವ, 1958 ರಲ್ಲಿ ಪದ್ಮಭೂಷಣ, 1964 ರಲ್ಲಿ ರಾಷ್ಟ್ರಕವಿ ಪುರಸ್ಕಾರ, 1968 ರಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಇವು ಮುಖ್ಯವಾದವು ಅಲ್ಲದೇ ಇನ್ನು ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ.
ಕೊಳಲು, ಪಾಂಚಜನ್ಯ, ನವಿಲು, ಕಲಾಸುಂದರಿ, ಕಥನ, ಕವನಗಳು, ಕೋಗಿಲೆ ಮತ್ತು ಸೋವಿಯಟ್ ರಷ್ಯಾ ಪ್ರೇಮ ಕಾಶ್ಮೀರ ಅಗ್ನಿಹಂಸ ಕೃತ್ತಿಕೆ ಪಕ್ಷಿಕಾಶಿ, ಕಿಂಕಿಣಿ, ಷೋಡಶಿ, ಚಂದ್ರಮಂಚಕೆ ಬಾ ಚಕೋರಿ, ಇಕ್ಷುಗಂಗೋತ್ರಿ, ಅನಿಕೇತನ, ಜೇನಾಗುವ, ಅನುತ್ತರಾ, ಮಂತ್ರಾಕ್ಷತೆಯಂತಹ 30 ಕ್ಕೂ ಹೆಚ್ಚು ಕವನ ಸಂಕಲನಗಳು ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳು, ಯಮನಸೋಲು, ವಾಲ್ಮೀಕಿಯ ಭಾಗ್ಯ, ಶೂದ್ರ ತಪಸ್ವಿ, ಚಂದ್ರಹಾಸದಂತಹ ನಾಟಕಗಳು, ಕಾವ್ಯ ಮೀಮಾಂಸೆ-ಕಾವ್ಯ ,ಶಿಶುಸಾಹಿತ್ಯ, ವಿಮರ್ಶೆ, ಪ್ರಬಂಧ ಬರೆದಿರುವ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಇವರಿಗೆ ಸರಕಾರ 1988 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.