70 ವರ್ಷದ ನಂತರ ಬಂತು ಸರ್ಕಾರಿ ಬಸ್....!
ಗುರುವಾರ, 19 ಜುಲೈ 2018 (15:10 IST)
ಜಿಲ್ಲಾ ಕೇಂದ್ರದಿಂದ ನಾಲ್ಕು ಕಿ.ಮೀ. ದೂರ ಇದ್ದರೂ ಆ ಗ್ರಾಮದ ಜನ್ರು ನಿತ್ಯ ನಡೆದುಕೊಂಡೆ ಹೋಗಬೇಕಿತ್ತು. ಸ್ವಾತಂತ್ರ್ಯ ಸಿಕ್ಕು 7 ದಶಕಗಳೆ ಕಳೆದ್ರು ಈ ಗ್ರಾಮಕ್ಕೆ ಸರ್ಕಾರಿ ಬಸ್ಸಿನ ವ್ಯವಸ್ಥೆ ಇರಲಿಲ್ಲ. ಇಲ್ಲಿನ ಶಾಲಾ - ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ನಾಲ್ಕು ಕಿಲೋ ಮೀಟರ್ ವರೆಗೆ ನಡೆದುಕೊಂಡೇ ಹೋಗಬೇಕಾಗಿತ್ತು. ಈಗ ಆ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರಿ ಆರಂಭವಾಗಿದೆ. ಹಾಗಾಗಿ ಈ ಗ್ರಾಮದಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿದೆ.
ಯಾದಗಿರಿಯಿಂದ ಕೂಗಳತೆ ದೂರದಲ್ಲಿರುವ ಬೀರಾಳ ಪುಟ್ಟ ಗ್ರಾಮ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರಿರುವ ಈ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಕಳೆದ ಐವತ್ತು ವರ್ಷಗಳಿಂದ ಗ್ರಾಮಸ್ಥರು ಬಸ್ಸು ಬಿಡುವಂತೆ ಜನ ಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದ್ರು ಪ್ರಯೋಜನವಾಗಿರಲಿಲ್ಲ. ಈ ಬಾರಿ ಯಾದಗಿರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಶಾಸಕರಾಗಿ ಆಯ್ಕೆಯಾದ ಮೇಲೆ, ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ.
ಶಾಸಕರು ಇಂದು ಗ್ರಾಮಕ್ಕೆ ಆಗಮಿಸಿ ಬಸ್ಸ್ ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ಇದರಿಂದ ಗ್ರಾಮಸ್ಥರೇ ಖುಷಿಯಿಂದ ಬಸ್ಸಿಗೆ ಹೂವಿನ ಅಲಂಕಾರ ಮಾಡಿ ಸರ್ಕಾರಿ ಬಸ್ಸ್ ಸ್ವಾಗತಿಸಿದರು. ಅಲ್ಲದೆ ಸ್ವತಃ ಶಾಸಕ ವೆಂಕಟರೆಡ್ಡಿ ಮುದ್ನಾಳ ಬಸ್ಸಿನಲ್ಲಿ ಕುಳಿತು ಟಿಕೆಟ್ ಪಡೆದು ಪ್ರಯಾಣಿಸಿದರು. ಗ್ರಾಮದ ಶಾಲಾ -ಕಾಲೇಜು ವಿಧ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಸಕರಿಗೆ ಅಭಿನಂದನೆಗಳು ಹೇಳಿ ಸಂತೋಷದಿಂದ ಹೊಸ ಬಸ್ಸಿನಲ್ಲಿ ಮೊದಲ ಪ್ರಯಾಣ ಬೆಳೆಸಿ ಖುಷಿಪಟ್ರು.