ಮಹಾರಾಷ್ಟ್ರಕ್ಕೆ ಮಣಿದ ಸರಕಾರ; ಕೋಯ್ನಾ ನೀರು ಬರುತ್ತೆ ಎಂದ ಡಿಕೆಶಿ
ಮಹಾರಾಷ್ಟ್ರದ ಒತ್ತಡಕ್ಕೆ ಕೊನೆಗೂ ರಾಜ್ಯ ಸರಕಾರ ಮಣಿದಿದೆ.
ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವ ಸಂಬಂಧ ಮಹಾರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ. ಇಂದು ಸಂಜೆಯೊಳಗಾಗಿ ಕಡತಕ್ಕೆ ಸಹಿ ಮಾಡಿ ಕಳುಹಿಸುವುದಾಗಿ ಪ್ರಕಟಿಸಿದ್ದಾರೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್.
ಡಿ.ಕೆ.ಶಿವಕುಮಾರ್ ಈ ಕುರಿತು ಮಾತನಾಡಿದ್ದು, ನಮಗೆ ರಾಜ್ಯದ ಜನರ ಹಿತ ಮುಖ್ಯ. ನಮ್ಮ ಉತ್ತರ ಕರ್ನಾಟಕದ ಜನರಿಗೆ ತುರ್ತಾಗಿ ನೀರು ಕೊಡಲೇಬೇಕು. ಮೊದಲೆಲ್ಲಾ ಕರ್ನಾಟಕದಿಂದ ಹಣ ಪಡೆದು ನೀರು ಬಿಡುಗಡೆ ಮಾಡುತ್ತಿದ್ದ ಮಹಾರಾಷ್ಟ್ರ ಸರ್ಕಾರ ಈ ಬಾರಿ ವರಸೆ ಬದಲಿಸಿದೆ.
ನೀರಿಗೆ ಬದಲಾಗಿ ಕರ್ನಾಟಕದಿಂದಲೂ ನೀರು ಕೊಡಲೇಬೇಕು. ಈ ಸಂಬಂಧ ಲಿಖಿತ ಒಪ್ಪಂದ ಮಾಡಿಕೊಳ್ಳುವಂತೆ ಪಟ್ಟು ಹಿಡಿದಿದೆ. ಮೊದಲು ಮಾನವೀಯತೆಯ ದೃಷ್ಟಿಯಿಂದ ನೀರು ಬಿಡಲು ಒಪ್ಪಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಇದ್ದಕ್ಕಿದ್ದಂತೆ ತಮ್ಮ ಮಾತಿಗೆ ತಪ್ಪಿದ್ದಾರೆ. ಆದರೂ ನಮ್ಮ ರಾಜ್ಯದ ಜನರಿಗಾಗಿ ಅವರ ಒತ್ತಡಕ್ಜೆ ನಾವು ಮಣಿದಿದ್ದೇವೆ ಎಂದರು.