ಸರ್ಕಾರಿ ಬಂಗಲೆಗೆ ಭಿಕ್ಷೆ ಬೇಡಲ್ಲ..ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ: ಹೊರಟ್ಟಿ ಬೇಸರ

ಶನಿವಾರ, 4 ಸೆಪ್ಟಂಬರ್ 2021 (08:02 IST)
ಹುಬ್ಬಳ್ಳಿ: ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸಭಾಪತಿಗಳಾಗಿ ಅಧಿಕಾರ ವಹಿಸಿಕೊಂಡು 9 ತಿಂಗಳಾಗುತ್ತಾ ಬಂತು. ಆದರೆ ಇದುವರೆಗೂ ಅವರಿಗೆ ಬೆಂಗಳೂರಿನಲ್ಲಿ ಸರ್ಕಾರಿ ಬಂಗಲೆ ಅಲಾಟ್ ಆಗಿಲ್ಲ. ಬಿಜೆಪಿ ಸರ್ಕಾರದ ಧೋರಣೆಗೆ ಹೊರಟ್ಟಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬಂಗಲೆಗಾಗಿ ಭಿಕ್ಷೆ ಬೇಡೋಕೆ ಆಗಲ್ಲ, ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಸರ್ಕಾರಿ ಮನೆ ಇನ್ನೂ ಸಿಕ್ಕಿಲ್ಲ. ರಾಜ್ಯ ಸರ್ಕಾರದ ಧೋರಣೆಗೆ ಬಸವರಾಜ್ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮತ ಚಲಾಯಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೊರಟ್ಟಿ, ಇಲ್ಲಿಯವರೆಗೆ ರಾಜ್ಯ ಸರ್ಕಾರಕ್ಕೆ 7 ಪತ್ರಗಳನ್ನು ಬರೆದಿದ್ದೇನೆ. 9 ತಿಂಗಳಿಂದ ಪತ್ರ ಬರೆಯುತ್ತಲೇ ಇದ್ದೇನೆ. ಇವತ್ತು ಎಂಟನೆಯ ಪತ್ರವನ್ನು ಬರೆಯುತ್ತಿದ್ದೇನೆ. ಇದೇ ನನ್ನ ಕೊನೆಯ ಪತ್ರ. ಇನ್ನುಮುಂದೆ ಸರ್ಕಾರಕ್ಕೆ ಪತ್ರವನ್ನು ಬರೆಯುವ ಗೋಜಿಗೆ ಹೋಗಲ್ಲ ಎಂದರು.
ನನಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿಲ್ಲ
ನನಗೆ ಮನೆ ಮಂಜೂರು ಮಾಡಿದರೆ ಮಾಡಲಿ ಇಲ್ಲವೇ ಬಿಟ್ಟು ಬಿಡಲಿ. ನನಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿಲ್ಲ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ನನಗೆ ಮನೆ ಕೊಡಿಸಲು ಬಸವರಾಜ್ ಬೊಮ್ಮಾಯಿ ಪ್ರಯತ್ನಿಸಿದ್ದರು. ಈಗ ಅವರೇ ಮುಖ್ಯಮಂತ್ರಿಗಳಾಗಿದ್ದು ಏನ್ಮಾಡ್ತಾರೋ ಕಾದು ನೋಡ್ತೇನೆ ಎಂದರು. ಒಂದನೇ ತರಗತಿಯಿಂದ ಶಾಲೆ ಆರಂಭಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, ಸರ್ಕಾರ ಶಾಲೆಯನ್ನು ಪುನರಾರಂಭಿಸಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ ಎಂದರು.
ನಾನಾಗಿದ್ರೆ ಒಂದೇ ದಿನದಲ್ಲಿ ಶಿಕ್ಷಕರ ವರ್ಗಾವಣೆ
ಶಿಕ್ಷಕರ ವರ್ಗಾವಣೆ ವಿಚಾರಕ್ಕೆ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ನಾನಾಗಿದ್ರೆ ಒಂದೇ ದಿನದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿಸುತ್ತಿದ್ದೆ. ಆದರೆ ಸರ್ಕಾರ ಅದ್ಯಾಕೆ ಶಿಕ್ಷಕರ ವರ್ಗಾವಣೆ ಮಾಡ್ತಿ ಇಲ್ಲವೋ ಗೊತ್ತಿಲ್ಲ. ಇದೇ ಮೊದಲ ಬಾರಿಗೆ ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ಈ ರೀತಿಯ ಗೊಂದಲ ಸೃಷ್ಟಿಸಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕ್ತಾ ಇರೋದ್ರಿಂದ ಈ ರೀತಿ ಆಗ್ತಿದೆ. ಭ್ರಷ್ಟ ಅಧಿಕಾರಿಗಳ ಮೇಲೆ ಮೊದಲು ಕ್ರಮ ತೆಗೆದುಕೊಳ್ಳಬೇಕಿದೆ ಎಂದರು.
ಯಾರು ನಿಂತಾರೆ ಅಂತಾನೂ ಗೊತ್ತಿಲ್ಲ
ಎಲ್ಲಿಯವರೆಗೆ ಪ್ರಜಾಪ್ರಭುತ್ವ ಸುಧಾರಣೆ ಆಗೋದಿಲ್ಲವೋ, ಅಲ್ಲಿಯವರೆಗೆ ಜನಪರ ಕೆಲಸಗಳು ಆಗುವುದಿಲ್ಲ. ಬರುವಂತಹ ದಿನಗಳಲ್ಲಿ ಪ್ರಜಾಪ್ರಭುತ್ವ ಮತ್ತಷ್ಟು ಸಂಕಷ್ಟ ಎದುರಿಸಲಿದೆ. ಯಾರೇ ಆಯ್ಕೆಯಾಗಿ ಬಂದರೂ ನಗರವನ್ನು ಸುಧಾರಣೆ ಮಾಡುವ ಕೆಲಸ ಮಾಡಬೇಕು. ನಾನು ಇವತ್ತು ಮತ ಹಾಕೋಕೆ ಬಂದೀನಿ. ಆದ್ರೆ ಯಾವ ಪಕ್ಷದವರೇ ಆಗಲಿ, ಯಾರೇ ಆಗಲಿ ಬಂದು ಮತ ಹಾಕುವಂತೆ ಹೇಳಿಲ್ಲ. ಯಾರು ನಿಂತಾರೆ ಅಂತಾನೂ ಗೊತ್ತಿಲ್ಲ ಎಂದು ಬೇರಸ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ