ಅಂತೂ ಇಂತೂ ಸಾಕಷ್ಟು ಆಲೋಚನೆ, ವಿಚಾರ, ಚರ್ಚೆ, ಸಭೆಗಳ ನಂತರ ರಾಜ್ಯ ಸರ್ಕಾರ ಶಾಲೆಗಳನ್ನು ಹಂತಹಂತವಾಗಿ ತೆರೆಯುತ್ತಿದೆ. ಈಗಾಗಲೇ ಯಶಸ್ವಿಯಾಗಿ 9ರಿಂದ 12 ಅಥವಾ ದ್ವಿತೀಯ ಪಿಯುಸಿ ತರಗತಿಗಳು ನಡೆಯುತ್ತಿರುವುದರಿಂದ ಅದೇ ಧೈರ್ಯದ ಮೇಲೆ 6 ರಿಂದ 8 ನೇ ತರಗತಿವರೆಗೆ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಆದರೆ ಒಂದೇ ಶಾಲೆಯ ಕಟ್ಟಡದಲ್ಲಿ ಎಲ್ಲಾ ಮಕ್ಕಳೂ ಪಾಠ ಕೇಳಬೇಕಾದ್ದರಿಂದ ಮತ್ತು ಈಗ ಒಟ್ಟಿಗೆ 6ರಿಂದ 12ನೇ ತರಗತಿವರಗಿನ ಮಕ್ಕಳು ಇರೋದ್ರಿಂದ ನಿಯಮಗಳು ಮತ್ತಷ್ಟು ಕಟ್ಟುನಿಟ್ಟಾಗಿ ಇರಲೇಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪ್ರಮುಖರ ಜೊತೆಗೆ ಶಿಕ್ಷಣ ಇಲಾಖೆಯ ತಜ್ಞರು ಕೂಡಾ ಜೊತೆ ಸೇರಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಯಾವ ತರಗತಿಯ ಮಕ್ಕಳು ಯಾವಾಗ ಶಾಲೆಗೆ ಬರಬೇಖು, ಯಾವ ತರಗತಿಯೊಳಗೆ ಎಷ್ಟು ಮಕ್ಕಳಿರಬೇಕು, ಶಿಕ್ಷಕರು ಮತ್ತು ಸಿಬ್ಬಂದಿಗೆ ಯಾವ ನಿಯಮ…ಈ ಎಲ್ಲದರ ವಿವರ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿದೆ.
ಸೆಪ್ಟೆಂಬರ್ 6 ರಿಂದ ಎರಡನೇ ಹಂತದ ಶಾಲೆ ಪ್ರಾರಂಭವಾಗಲಿದೆ. ಪಾಸಿಟಿವಿಟಿ ಶೇ.2 ಕ್ಕಿಂತ ಕಡಿಮೆ ಇರುವ ತಾಲೂಕು ವಲಯಗಳಲ್ಲಿ ಮಾತ್ರ ಶಾಲೆ ಆರಂಭ ಮಾಡಲು ಸರ್ಕಾರ ಸೂಚಿಸಿದೆ. 6 ರಿಂದ 8 ನೇ ತರಗತಿ ಪ್ರಾರಂಭಜ ಹಿನ್ನೆಲೆಯಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿರುವ SಔP ಪಾಲಿಸುವುದು ಕಡ್ಡಾಯ ಎನ್ನಲಾಗಿದೆ. ಇದರೊಂದಿಗೆ ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕೂಡಾ ಕಡ್ಡಾಯ ಎಂದು ಕಡಕ್ಕಾಗಿ ತಿಳಿಸಲಾಗಿದೆ. ಹಾಗಾಗಿ ಪೋಷಕರು ಆತಂಕದಲ್ಲಿ ಇದ್ದರೆ ಮಕ್ಕಳನ್ನು ಶಾಲೆಗೆ ಕಳಿಸದೇ ಇರುವ ಅವಕಾಶ ಈ ಮೂಲಕ ಕಲ್ಪಿಸಲಾಗಿದೆ. ಅನುಮತಿ ಪತ್ರದಲ್ಲಿ ವಿದ್ಯಾರ್ಥಿಗೆ ಕೋವಿಡ್ ಸೋಂಕು ಇಲ್ಲದೆ ಇರೋದನ್ನ ಪೋಷಕರು ದೃಢೀಕರಿಸಬೇಕು ಎಂದು ತಿಳಿಸಲಾಗಿದೆ.
ಇನ್ನು ವಿದ್ಯಾರ್ಥಿಗಳು ಕುಡಿಯುವ ನೀರು ಹಾಗೂ ಆಹಾರವನ್ನು ಮನೆಯಿಂದಲೇ ತರಬೇಕು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಡಳಿತ ಮಂಡಳಿಗಳಿಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ. ಶಾಲೆಗೆ ಬಾರದೇ ಇದ್ದರೂ ಆನ್ಲೈನ್ ತರಗತಿಗಳು ಎಂದಿನಂತೆ ನಡೆಯಲಿದೆ. ಹಾಗಾಗಿ ಆನ್ ಲೈನ್ ತರಗತಿಗೂ ಅವಕಾಶವಿದೆ. ಸೋಮವಾರ ದಿಂದ ಶುಕ್ರವಾರದವರೆಗೆ ಮಾತ್ರ ತರಗತಿ ನಡೆಸಬೇಕು. ಉಳಿದ ದಿನಗಳಲ್ಲಿ ಶಾಲೆಯ ಸ್ವಚ್ಚತೆ ಮಾಡಿಕೊಳ್ಳಬೇಕು. ಯಾವ ತರಗತಿಗೆ ಯಾವ ಸಮಯ?
6 ರಿಂದ 8 ನೇ ತರಗತಿ ನಿರ್ವಹಣೆ ವೇಳಾಪಟ್ಟಿ ಕೂಡಾ ನೀಡಲಾಗಿದೆ. 8 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ತರಗತಿ ನಡೆಸುವುದು ಎಂದು ನಿರ್ಧರಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ 4:30 ರ ತರಗತಿ ನಡೆಸುವುದು ಎಂದು ತಿಳಿಸಲಾಗಿದೆ. ಬೆಳಗಿನ ವೇಳೆಯಲ್ಲಿ 6 ಮತ್ತು 7ನೇ ತರಗತಿಯ ಮಕ್ಕಳಿಗೆ ಪಾಠಗಳು ನಡೆಯಲಿದೆ. ಬೆಳಿಗ್ಗೆ 10: 30 ರಿಂದ ಮಧ್ಯಾಹ್ನ 1:30 ರವರೆಗೆ 15 ರಿಂದ 20 ಮಕ್ಕಳ ತಂಡ ರಚಿಸಿ ಪಾಠ ಮಾಡಬೇಕು. ಪಾಳಿ ಪದ್ಧತಿಯಲ್ಲಿ ಮಕ್ಕಳಿಗೆ ಪಾಠ ನಡೆಯಬೇಕು. ಇನ್ನು ಕೇರಳ ಗಡಿಭಾಗಕ್ಕೆ ಹೊಂದಿಕೊಂಡಿರುವ ತಾಲ್ಲೂಕು ಹಾಗೂ ವಲಯ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಶಾಲೆ ಪ್ರಾರಂಭ ಮಾಡಬೇಕು.
ಕೊರೊನಾ ಸೋಂಕಿನ ಆರ್ಭಟ ಕಡಿಮೆ ಇರುವ ಸ್ಥಳಗಳಲ್ಲಿ ಮಾತ್ರ ಶಾಲೆಗಳು ತೆರೆಯಲಿದೆ. ಉಳಿದ ಪ್ರದೇಶಗಳ ಮಕ್ಕಳು ಇನ್ನೂ ಕೆಲ ಸಮಯ ಕಾಯಬೇಕಿದೆ. ಆದ್ರೆ ಹಂತಹಂತವಾಗಿ ಶಾಲೆಗಳು ತೆರೆಯುತ್ತಿರುವುದು ಕಳೆದ ಒಂದೂವರೆ ವರ್ಷದಿಂದ ಶಾಲೆಯನ್ನು, ಗೆಳೆಯರನ್ನು ಕಳೆದುಕೊಂಡಿದ್ದ ವಿದ್ಯಾರ್ಥಿಗಳಿಗಂತೂ ಬಹಳ ಖುಷಿಕೊಟ್ಟಿದೆ. ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆಲ್ಲಾ ಕಡ್ಡಾಯವಾಘಿ ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂದು ತಿಳಿಸಲಾಗಿದ್ದು ಅದಕ್ಕಾಗೇ ಕೋವಿನ್ ಪೋರ್ಟಲ್ನಲ್ಲೂ ವಿಶೇಷ ಅವಕಾಶ ಕಲ್ಪಿಸಲಾಗಿದೆ.