ಬೆಂಗಳೂರು: ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವ ಬಗ್ಗೆ ಸಚಿವ ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದರು. ಅಲ್ಲಿನ ಜನರ ಜನಾಭಿಪ್ರಾಯವನ್ನು ಪಡೆದೇ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕುಮಾರಸ್ವಾಮಿಯವರು ರಾಮನಗರ ಜಿಲ್ಲೆ ಸೃಜಿಸುವಾಗ, ಅಲ್ಲಿನ ಇತಿಹಾಸದ ಬಗ್ಗೆ ಯೋಚಿಸಿರಲಿಲ್ಲವೇ ಎಂದು ಮರುಪ್ರಶ್ನಿಸಿದರು.
ಜಾರಿನಿರ್ದೇಶನಾಲಯ ತನ್ನ ಎಲ್ಲೆಯನ್ನು ಮೀರುತ್ತಿರುವ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಗಮನಿಸಿರುವ ಕುರಿತು ಪತ್ರರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಇ.ಡಿ ಯವರು, ಐ.ಟಿ.ಯವರು ತನಿಖೆ ಮಾಡುವುದನ್ನೇ ಆಗಲಿ ಅಥವಾ ಕಪ್ಪು ಹಣ ವ್ಯವಹಾರವನ್ನು ಪತ್ತೆ ಹಚ್ಚುವುದರ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ ಇ.ಡಿ ಮತ್ತು ಐ.ಟಿ ದಾಳಿಗಳು ರಾಜಕೀಯ ದುರುದ್ದೇಶದಿಂದ ನಡೆಯಕೂಡದು. ಇದೀಗ ಗೃಹ ಸಚಿವ ಜಿ ಪರಮೇಶ್ವರ ಅವರ ಶಿಕ್ಷಣ ಸಂಸ್ಥೆಯ ಮೇಲೆ ನಡೆದಿರುವ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ದೂರಿದರು.
ಯಂಗ್ ಇಂಡಿಯಾ ಸಂಸ್ಥೆಗೆ ದೇಣಿಗೆ ನೀಡಿರುವ ಬಗ್ಗೆ ಡಿಸಿಎಂ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರವರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಬಗ್ಗೆ ಮಾತನಾಡಿ, ಯಾವುದೇ ಸಂಸ್ಥೆಗೆ ದೇಣಿಗೆ ನೀಡುವುದು ತಪ್ಪಲ್ಲ ಎಂದರು.