ಬೆಂಗಳೂರು: ಇನ್ನು ಮುಂದೆ ವೀಕೆಂಡ್ ಗಳಲ್ಲಿ ಸಾರ್ವಜನಿಕರಿಗೂ ವಿಧಾನಸೌಧಕ್ಕೆ ಪ್ರವೇಶ ನೀಡಲಾಗುವುದು ಎಂದು ಸಚಿವ ಎಚ್ ಕೆ ಪಾಟೀಲ್ ಘೋಷಣೆ ಮಾಡಿದ್ದರು. ಆದರೆ ಅದರ ಜೊತೆಗೆ ಸರ್ಕಾರ ಮತ್ತೊಂದು ಟ್ವಿಸ್ಟ್ ಕೊಟ್ಟಿದೆ.
ಇಷ್ಟು ದಿನ ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ನಿಂತು ಫೋಟೋ ಹೊಡೆಸಿಕೊಳ್ಳುವುದಷ್ಟೇ ಸಾರ್ವಜನಿಕರಿಗಿದ್ದ ಅವಕಾಶವಾಗಿತ್ತು. ಆದರೆ ಈಗ ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಜೂನ್ 1 ರಿಂದ ಪ್ರತೀ ತಿಂಗಳ ಎಲ್ಲಾ ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಆದರೆ ವಿಧಾನಸೌಧವನ್ನು ಇನ್ನಷ್ಟು ಹತ್ತಿರದಿಂದ ನೋಡಬಹುದು ಎಂದು ಖುಷಿಯಲ್ಲಿದ್ದ ಜನರಿಗೆ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ.
ವಿಧಾನಸೌಧದ ಒಳಗೆ ಪ್ರವೇಶಿಸಲು ಆನ್ ಲೈನ್ ಮೂಲಕ ಬುಕಿಂಗ್ ಮಾಡಿ ಶುಲ್ಕ ಪಾವತಿಸಬೇಕಾಗುತ್ತದೆ. ಕೆಸ್ ಟಿಡಿಸಿ ವೆಬ್ ಸೈಟ್ ನಲ್ಲಿ ನೀಡಲಾಗುವ ಸ್ಲಾಟ್ ಗಳ ಆಧಾರದಲ್ಲಿ ಬುಕಿಂಗ್ ಮಾಡಿ ಶುಲ್ಕ ಪಾವತಿಸಿದರೆ ಒಳಗೆ ಪ್ರವೇಶಿಸಲು ಅನುಮತಿ ಸಿಗುತ್ತದೆ. 16 ವರ್ಷದೊಳಗಿನವರಿಗೆ ಉಚಿತ ಪ್ರವೇಶವಿದೆ. ಆದರೆ 16 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಲಾ 50 ರೂ. ಶುಲ್ಕ ವಿಧಿಸಲಾಗುತ್ತದೆ.
ಇದಕ್ಕೆ ಬಿಜೆಪಿ ಭಾರೀ ಟೀಕೆ ನಡೆಸಿದೆ. ವಿಧಾನಸೌಧವಿಟ್ಟುಕೊಂಡೂ ರಾಜ್ಯ ಸರ್ಕಾರ ಹಣ ವಸೂಲಿಗೆ ಮುಂದಾಗಿದೆ. ಅಂದರೆ ಈ ಸರ್ಕಾರ ಎಂಥಾ ಲಜ್ಜೆಗೆಟ್ಟ ಸರ್ಕಾರವಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.