ಹುಬ್ಬಳ್ಳಿ: ಧರ್ಮಸ್ಥಳ ವಿರುದ್ಧದ ಷಡ್ಯಂತ್ರದ ಹಿಂದೆ ಸಾಕ್ಷಿ ದೂರುದಾರ ಐದು ಮಂದಿ ಹೆಸರು ಹೇಳಿದ್ರ ಅವರನ್ನು ಬಂಧಿಸಲಿಲ್ಲ. ಇದರ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಷಡ್ಯಂತ್ರವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಡಿ ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ತೇಜೋವಧೆ ಮಾಡಲಾಯಿತು. ಇನ್ನೂ ಬುರುಡೆ ಪ್ರಕರಣ ಸಂಬಂಧ ಮುಸುಕುಧಾರಿ ಈಗಾಗಲೇ ಹೇಳಿಕೆಯನ್ನು ನೀಡಿದ್ದಾನೆ. ಹೀಗಿದ್ದಾಗಲೂ ಅವರನ್ನು ಬಂಧಿಸದೆ, ವ್ಯವಸ್ಥಿತವಾಗಿ ಪ್ರಕರಣ ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ ಎಂದರು.
ಮೃತ ವ್ಯಕ್ತಿಯ ಹೂತ ಶವ ಹೊರ ತೆಗೆಯಬೇಕೆಂದರೆ ಕೋರ್ಟ್ ಅನುಮತಿ ಬೇಕಾಗುತ್ತದೆ. ಆದರೆ, ಧರ್ಮಸ್ಥಳದಲ್ಲಿ ಅದ್ಯಾವುದನ್ನೂ ಪಾಲಿಸದೆ ಬೇಕಾಬಿಟ್ಟಿಯಾಗಿ ಹತ್ತಕ್ಕೂ ಹೆಚ್ಚು ಕಡೆ ಅಗೆದು ಶೋಧ ನಡೆಸಿದರು. ಎಲ್ಲೂ ಶವದ ಕುರುಹು ಸಿಗಲಿಲ್ಲ. ಸಾಕ್ಷಿ ದೂರುದಾರ ಕೆಲವು ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ. ಈ ಎಲ್ಲ ಬೆಳವಣಿಗೆಯಲ್ಲಿ ಹೊರ ರಾಜ್ಯದವರ ಕೈವಾಡವಿದ್ದು, ಸರ್ಕಾರ ಅದರ ಭಾಗವಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಹೊರ ದೇಶಗಳಿಂದ ಭಯೋತ್ಪಾದಕರ ನಿಧಿ ಬಳಕೆಯಾಗುತ್ತಿರಬಹುದು. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಈ ಹಿಂದೆಯೇ ಒತ್ತಾಯಿಸಿದ್ದೆ. ಅದರ ಜೊತೆಗೆ ನ್ಯಾಯಾಲಯದ ಅಡಿಯಲ್ಲಿಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.