ಯಕ್ಷಗಾನದ ಮೇರು ಪ್ರತಿಭೆ ಚಿಟ್ಟಾಣಿ ರಾಮಚಂದ್ರ ಹೆಗಡೆ ವಿಧಿವಶ

ಬುಧವಾರ, 4 ಅಕ್ಟೋಬರ್ 2017 (08:14 IST)
ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ಯಕ್ಷಗಾನದ ಮೇರು ಪ್ರತಿಭೆ, ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ(84)ಯವರು ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚಿಟ್ಟಾಣಿ ರಾಮಚಂದ್ರ ಅವರು, ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1933 ಜನವರಿ 1ರಂದು ಜನಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು, ಉತ್ತರಕನ್ನಡ ಜಿಲ್ಲೆಯ ಹೊನ್ನಾವರದವರು. 7 ವರ್ಷ ವಯಸ್ಸಿದ್ದಾಗಲೇ ಯಕ್ಷಗಾನಕ್ಕೆ ಧುಮುಕಿದ ಹೆಗಡೆಯವರು, 14ನೇ ವಯಸ್ಸಿಗೆ ಪ್ರಮುಖ ಪಾತ್ರಗಳನ್ನು ಮಾಡಲು ಆರಂಭಿಸಿದ್ದರು. 84 ವರ್ಷದ ಇಳಿ ವಯಸ್ಸಿನಲ್ಲೂ ಅವರು ಯಕ್ಷಗಾನದ ಕುಣಿತ ಹಾಕುವುದನ್ನು ತಪ್ಪಿಸಿರಲಿಲ್ಲ.

ಚಿಟ್ಟಾಣಿ ರಾಮಚಂದ್ರ ಹೆಗಡೆಯವರದ್ದು ಬಡಗುತಿಟ್ಟು ಯಕ್ಷಗಾನ ಶೈಲಿ. ಆದರೆ, ರಾಮಚಂದ್ರ ಹೆಗಡೆಯವರ ಕುಣಿತ ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಅವರ ಕುಣಿತವನ್ನು ಚಿಟ್ಟಾಣಿ ಘರಾನಾ ಎಂದೇ ಕರೆಯಲಾಗುತ್ತಿತ್ತು. ಚಿಟ್ಟಾಣಿ ಮಾಡಿರುವ 'ಕೌರವ', ದುಷ್ಟಬುದ್ಧಿ', 'ಭಸ್ಮಾಸುರ', 'ಕೀಚಕ', 'ಕರ್ಣ', 'ರುದ್ರಕೋಪ', 'ಕಂಸ' ಮೊದಲಾದ ಪಾತ್ರಗಳು ಯಕ್ಷಗಾನ ವಲಯದಲ್ಲಿ ಬಹಳ ಜನಪ್ರಿಯವಾಗಿವೆ.

ಯಕ್ಷಲೋಕದ ಖಳನಟ ಬಿರುದಾಂಕಿತರಾಗಿದ್ದ ಚಿಟ್ಟಾಣಿ, ಯಕ್ಷಗಾನಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ತಂದುಕೊಟ್ಟವರು. ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರಿಂದ ಹೊಗಳಿಸಿಕೊಂಡಿದ್ದ ಚಿಟ್ಟಾಣಿ, ನವರಸಗಳನ್ನು ರಂಗದ ಮೇಲೆ ತರುತ್ತಿದ್ದ ಅಪ್ರತಿಮ ಮೇರು ಕಲಾವಿದ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ವಿಶೇಷವೆಂದರೆ, ಈ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದರು ಇವರು.

2009ರಲ್ಲಿ ಶಿವರಾಮ ಕಾರಂತ ಪ್ರಶಸ್ತಿ, 2012ರಲ್ಲಿ ಪದ್ಮಶ್ರೀ, 2004ರಲ್ಲಿ ಜನಪದಶ್ರೀ, 2013ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, 1991ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2009ರಲ್ಲಿ ಕಾರ್ಕಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ, 2012ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ ದೊರಕಿದೆ. ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ನಿಧನಕ್ಕೆ ಯಕ್ಷಲೋಕವೇ ಕಂಬನಿ ಮಿಡಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ