ಎನ್ ಡಿಎ ಸರ್ಕಾರದಲ್ಲಿ ದೇವೇಗೌಡರ ಕುಟುಂಬದ ಇಬ್ಬರಿಗೆ ಮಂತ್ರಿಗಿರಿ ಫಿಕ್ಸ್

Krishnaveni K

ಬುಧವಾರ, 5 ಜೂನ್ 2024 (13:01 IST)
Photo Credit: Instagram
ನವದೆಹಲಿ: ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಕುಟುಂಬಕ್ಕೆ ಅದೃಷ್ಟ ಖುಲಾಯಿಸಲಿದೆ. ಕುಟುಂಬದ ಇಬ್ಬರು ಸದಸ್ಯರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಯಿದೆ.

ಈ ಬಾರಿ ದೇವೇಗೌಡರ ಕುಟುಂಬದಿಂದ ಎಚ್ ಡಿ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಮತ್ತು ಡಾ ಸಿಎನ್ ಮಂಜುನಾಥ್ ಸ್ಪರ್ಧಿಸಿದ್ದರು. ಈ ಪೈಕಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಗೆದ್ದರೆ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಸೋಲು ಕಂಡಿದ್ದಾರೆ. ದೇವೇಗೌಡರ ಅಳಿಯ ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಭಾವಿ ಡಿಕೆ ಸುರೇಶ್ ವಿರುದ್ಧವೇ ಗೆದ್ದು ಕಾಂಗ್ರೆಸ್ ಗೆ ಪೆಟ್ಟು ನೀಡಿದ್ದಾರೆ.

ಇದೀಗ ಕೇಂದ್ರದಲ್ಲಿ ಎನ್ ಡಿಎ ನೇತೃತ್ವದಲ್ಲಿ ಸರ್ಕಾರ ರಚನೆಯಾದರೆ ಕುಮಾರಸ್ವಾಮಿ ಮತ್ತು ಮಂಜುನಾಥ್ ಗೆ ಮಂತ್ರಿಗಿರಿ ಸಿಕ್ಕರೂ ಅಚ್ಚರಿಯಿಲ್ಲ. ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಭಾರೀ ಅಂತರದ ಗೆಲುವು ದಾಖಲಿಸಿದ್ದರು. ಈ ಬಾರಿ ಇಲ್ಲಿ ದಾಖಲೆಯ ಮತದಾನ ಕೂಡಾ ನಡೆದಿತ್ತು. ಕುಮಾರಸ್ವಾಮಿಗೆ ರಾಜ್ಯದಲ್ಲಿ ವರ್ಚಸ್ಸು ಕಡಿಮೆಯಾಗಿಲ್ಲ ಎನ್ನುವುದಕ್ಕೆ ಈ ಗೆಲುವು ಸಾಕ್ಷಿಯಾಗಿತ್ತು. ಇದೀಗ ಎನ್ ಡಿಎ ಸಭೆಗೆ ಕುಮಾರಸ್ವಾಮಿಗೆ ದೆಹಲಿಗೆ ಬರಲು ಬುಲಾವ್ ನೀಡಲಾಗಿದೆ. ದೇವೇಗೌಡರ ಬಗ್ಗೆ ಅಪಾರ ಗೌರವವಿಟ್ಟುಕೊಂಡಿರುವ ಮೋದಿ ಮುಂದೆ ತಮ್ಮ ನೇತೃತ್ವದಲ್ಲಿ ಸರ್ಕಾರ ರಚನೆಯಾದರೆ ಕುಮಾರಸ್ವಾಮಿಗೆ ಮಂತ್ರಿಗಿರಿ ಕೊಡಬಹುದು.

ಇನ್ನೊಂದೆಡೆ ಹೃದ್ರೋಗ ತಜ್ಞರಾಗಿ ತಮ್ಮದೇ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದ್ದ ಡಾ ಮಂಜುನಾಥ್ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೇ ಮೋದಿ ಮತ್ತು ಅಮಿತ್ ಶಾ. ಅವರು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಭಾರೀ ಗೆಲುವು ಕಂಡಿದ್ದಾರೆ. ಅವರನ್ನು ರಾಜಕೀಯಕ್ಕೆ ಕರೆತರುವ ಸಂದರ್ಭದಲ್ಲಿ ಮುಂದೆ ತಮ್ಮ ಸರ್ಕಾರ ಬಂದಾಗ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು ಎನ್ನಲಾಗಿದೆ.

ಇದಕ್ಕೆ ತಕ್ಕಂತೆ ಗೆಲುವಿನ ಬಳಿಕ ಮಾತನಾಡಿದ್ದ ಮಂಜುನಾಥ್  ಹೊಸ ಸರ್ಕಾರದಲ್ಲಿ ನಾನು ಆರೋಗ್ಯ ಮಂತ್ರಿಯಾದರೆ ಆಯುಷ್ಮಾನ್ ಭಾರತ ಯೋಜನೆಗೆ ಹೊಸ ಕಾಯಕಲ್ಪ ನೀಡುವುದಾಗಿ ಹೇಳಿಕೆ ನೀಡಿದ್ದರು. ಹೀಗಾಗಿ ಆರೋಗ್ಯ ಸಚಿವ ಹುದ್ದೆ ಮಂಜುನಾಥ್ ಗೆ ಸಿಕ್ಕರೂ ಅಚ್ಚರಿಯಿಲ್ಲ. ಇದರಿಂದಾಗಿ ಈಗ ರಚನೆಯಾಗಲಿರುವ ಹೊಸ ಎನ್ ಡಿಎ ಸರ್ಕಾರದಲ್ಲಿ ದೇವೇಗೌಡರ ಕುಟುಂಬದ ಇಬ್ಬರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ