ಜಮ್ಮು-ಕಾಶ್ಮೀರ 370 ರದ್ದು ಕುರಿತ ಅರ್ಜಿಗಳ ವಿಚಾರಣೆ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದಿನಿಂದ ಕೈಗೆತ್ತಿಕೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಬುಧವಾರದಿಂದ ಪ್ರತಿದಿನವೂ ವಿಚಾರಣೆ ನಡೆಸಲಿದೆ. ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿಗಳಲ್ಲದೆ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಕೂಡ ಸೇರಿದ್ದಾರೆ. ಜುಲೈ 11 ರಂದು ಪೀಠವು, ಜುಲೈ 27 ರೊಳಗೆ ಎಲ್ಲಾ ದಾಖಲೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಜೊತೆಗೆ ಈ ದಾಖಲೆಗಳನ್ನು ನಿರ್ವಹಿಸಲು ಇಬ್ಬರು ವಕೀಲರನ್ನು ನೊಡಲ್ ಅಧಿಕಾರಿಗಳಾಗಿ ನೇಮಿಸಲಾಗುವುದು ಎಂದು ಪೀಠ ಈ ಮೊದಲು ಹೇಳಿತ್ತು. ಸೋಮವಾರ ಹಾಗೂ ಶುಕ್ರವಾರ ಎರಡು ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನವೂ ವಿಚಾರಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಬರೋಬ್ಬರಿ ಸುಮಾರು ನಾಲ್ಕು ವರ್ಷಗಳ ಬಳಿಕ ಈಗ ವಿಚಾರಣೆ ನಡೆಯುತ್ತಿದೆ.