ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ
ಶುಕ್ರವಾರ, 10 ಡಿಸೆಂಬರ್ 2021 (20:35 IST)
ಬೆಂಗಳೂರು: ತೆರಿಗೆ ಕಟ್ಟದ ಆರೋಪದಲ್ಲಿ ಬೆಂಗಳೂರಿನ ಪ್ರಮುಖ ಶಾಪಿಂಗ್ ಮಾಲ್ ಆದ ಮಂತ್ರಿ ಮಾಲ್ಗೆ ಬಿಬಿಎಂಪಿ ಅಧಿಕಾರಿಗಳು 4 ದಿನಗಳ ಹಿಂದೆ ಬೀಗ ಹಾಕಿದ್ದು, ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿದೆ.
ತೆರಿಗೆ ಬಾಕಿಯ ಸ್ವಲ್ಪ ಭಾಗವನ್ನು ತಕ್ಷಣ ಪಾವತಿಸಲು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಒಳಗೊಂಡ ಹೈಕೋರ್ಟ್ನ ಏಕಸದಸ್ಯ ಪೀಠ ಅರ್ಜಿದಾರ ಹಮಾರಾ ಷೆಲ್ಟರ್ಸ್, ಅಭಿಷೇಕ್ ಪ್ರಾಪರ್ಟೀಸ್ಗೆ ಸೂಚನೆ ನೀಡಿದೆ.
ಮಂತ್ರಿಮಾಲ್, ಬಿಬಿಎಂಪಿ ಎರಡೂ ನಿಯಮಗಳನ್ನು ಉಲ್ಲಂಘಿಸಿವೆ. ನಿಗದಿತ ಅವಧಿಯಲ್ಲಿ ಮಂತ್ರಿ ಮಾಲ್ ತೆರಿಗೆ ಪಾವತಿಸಿಲ್ಲ. ಸೀಲ್ ಮಾಡಿ ಬಿಬಿಎಂಪಿಯೂ ನಿಯಮಾವಳಿ ಉಲ್ಲಂಘಿಸಿದೆ. ತಕ್ಷಣ 4 ಕೋಟಿ ರೂ. ಮೊತ್ತದ ಚೆಕ್ ನೀಡಲು ಕೋಟ್೯ ಸೂಚನೆ ನೀಡಿದೆ.
ಡಿ.13ರ ಮಧ್ಯಾಹ್ನದೊಳಗೆ 2 ಕೋಟಿ ಡಿಡಿ ಪಾವತಿಸಬೇಕು ಎಂದು ಆದೇಶಿಸಿ, ವಿಚಾರಣೆ ಡಿಸೆಂಬರ್ 13ಕ್ಕೆ ಮುಂದೂಡಲಾಗಿದೆ.