ಕರ್ನಾಟಕ ಹೈಕೋರ್ಟ್‌ನ ವಿಸ್ತೃತ ಪೀಠವು ಶುಕ್ರವಾರದಂದು ಹಿಜಾಬ್ ವಿವಾದದ ಮೇಲಿನ ಅರ್ಜಿಗಳ ವಿಚಾರಣೆ ನಡೆಸಿದ್ದು, ತನ್ನ ಮಧ್ಯಂತರ ಆದೇಶವನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಾಗಿ ಸೂಚಿಸಿದೆ.
ಮಧ್ಯಂತರ ಆದೇಶದಿಂದ ಮುಸ್ಲಿಮರಿಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳ ಪರ ವಕೀಲರು ಹೈಕೋರ್ಟ್ ಪೀಠದ ಗಮನಕ್ಕೆ ತಂದ ನಂತರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಪೀಠ ಈ ನಿರ್ದೇಶನ ನೀಡಿದೆ.
ಕಾಲೇಜುಗಳ ಆವರಣದಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗಳನ್ನು ನಿಷೇಧಿಸುವ ಮಧ್ಯಂತರ ಆದೇಶದ ಬಗ್ಗೆ ಸ್ಪಷ್ಟತೆ ನೀಡುವಂತೆ ವಕೀಲ ತಾಹೀರ್ ನ್ಯಾಯಾಲಯದ ಮುಂದೆ ಸಲ್ಲಿಸಿದರು. ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮುಸ್ಲಿಮರಾಗಿರುವ ಉರ್ದು ಶಾಲೆಗಳಲ್ಲಿಯೂ ಆದೇಶವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆದೇಶದ ಮೇರೆಗೆ ಅಂತಹ ಕಾಲೇಜುಗಳು ಮತ್ತು ಶಾಲೆಗಳ ಹೊರಗೆ ಹಿಜಾಬ್ ಮತ್ತು ಬುರ್ಖಾಗಳನ್ನು ತೆಗೆದುಹಾಕಲು ವಿದ್ಯಾರ್ಥಿಗಳಿಗೆ ಸೂಚಿಸಲಾಗುತ್ತಿದೆ ಎಂದು ವಕೀಲ ತಾಹೀರ್ ಹೇಳಿದರು.
ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಹಿಜಾಬ್ ಧರಿಸಿರುವ ಶಿಕ್ಷಕರನ್ನೂ ಅಧಿಕಾರಿಗಳು ತಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಆದೇಶ ಹೊರಡಿಸುತ್ತಿವೆ ಎಂದರು.