ಬೆಂಗಳೂರು: ಚಿಕ್ಕಪೇಟೆ, ಸಿದ್ದಾಪುರ ವಾರ್ಡ್ ನಲ್ಲಿ ನಡು ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡಿದ್ದಾರೆಂಬ ಆರೋಪ ಕೇಳಿಬಂದಿದ್ದು, ಹಿಂದೂಪರ ಕಾರ್ಯಕರ್ತ ತೇಜಸ್ ಗೌಡ ಎಂಬವರು ದೂರು ನೀಡಿದ್ದಾರೆ.
ಸಿದ್ದಾಪುರ ವಾರ್ಡ್ ನ ಅತೀಕ್ ಮಸೀದಿ ಬಳಿ ನಡು ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡಿದ್ದಾರೆ. ಇದಕ್ಕೆ ಅನುಮತಿ ಪಡೆದಿಲ್ಲ. ಹೀಗಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಎನ್ಸಿಆರ್ ದಾಖಲಿಸಿದ್ದಾರೆ.
ಫೆಬ್ರವರಿ 25 ಭಾನುವಾರ ಘಟನೆ ನಡೆದಿದೆ. ಇದು ಪ್ರಮುಖ ಆಸ್ಪತ್ರೆಗಳಿಗೆ ಹೋಗುವ ಮಾರ್ಗವಾಗಿದೆ. ಇದರಿಂದ ಆಂಬ್ಯುಲೆನ್ಸ್ ಮತ್ತಿತರ ತುರ್ತು ವಾಹನಗಳಿಗೆ ತೆರಳಲು ತೊಂದರೆಯಾಗಿದೆ. ಸಂಚಾರ ದಟ್ಟಣೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸಾರ್ವಜನಿಕರಿಗೆ ಸೇರಿದ ರಸ್ತೆಯಲ್ಲಿ ಈ ರೀತಿ ನಮಾಜ್ ಮಾಡುವುದು ಕಾನೂನು ಬಾಹಿರವಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನು ಎಲ್ಲರಿಗೂ ಒಂದೇ. ಮತ್ತೆ ಇಂತಹ ಕೃತ್ಯ ಪುನರಾವರ್ತನೆಯಾಗಬಾರದು ಎಂದು ತೇಜಸ್ ಗೌಡ ದೂರಿನಲ್ಲಿ ಮನವಿ ಮಾಡಿದ್ದಾರೆ. ಇದೀಗ ನಡು ರಸ್ತೆಯಲ್ಲಿ ನಮಾಜ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.