ತಿಯಾನ್‌ಜಿನ್: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯ ವೇಳೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರ ಎದುರಲ್ಲೇ ಭಯೋತ್ಪಾದನೆ ಹಾಗೂ ಪಹಲ್ಗಾಮ್ ದಾಳಿ ವಿಚಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ.
ತಿಯಾನ್‌ಜಿನ್‌ನಲ್ಲಿ ನಡೆಯುತ್ತಿರುವ ಎಸ್‌ಸಿಒ ವಾರ್ಷಿಕ ಶೃಂಗದಲ್ಲಿ ವಿಷಯ ಪ್ರಸ್ತಾಪಿಸಿದ ಮೋದಿ, ಪಹಲ್ಗಾಮ್‌ನಲ್ಲಿ ನಡೆದ ದಾಳಿ ಕೇವಲ ಭಾರತ ಮೇಲಿನದ್ದಲ್ಲ. ಇದು ಮಾನವೀಯತೆಯ ಮೇಲೆ ನಂಬಿಕೆಯನ್ನಿಡುವ ದೇಶಗಳಿಗೂ ಬಹಿರಂಗ ಸವಾಲು ಎಂದರು.
ಅದಲ್ಲದೆ ಭಯೋತ್ಪಾದನೆ ವಿರುದ್ಧ ದ್ವಂದ ನೀತಿ, ನಿಲುವುಗಳನ್ನು ಎಲ್ಲರೂ ಒಮ್ಮತದಿಂದ ತಿರಸ್ಕರಿಸಬೇಕು. ಇದು ಮಾನವೀಯತೆಯತ್ತ ನಮ್ಮ ಕರ್ತವ್ಯವಾಗಿದೆ' ಎಂದು ಒತ್ತಿ ಹೇಳಿದರು.
ಇನ್ನೂ ಪಾಕ್ ಹೆಸರು ಹೇಳದೆ, 'ಕೆಲವು ದೇಶಗಳು ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲಿಸುವುದನ್ನು ಒಪ್ಪಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ' ಎಂದು ಟಾಂಗ್ ಕೊಟ್ಟರು.
'ಭಾರತ ಕಳೆದ ನಾಲ್ಕು ದಶಕಗಳಿಂದ ಭಯೋತ್ಪಾದನೆಯ ನೋವನ್ನು ಅನುಭವಿಸುತ್ತಿದೆ. ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅನೇಕ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ' ಎಂದು ಅವರು ಹೇಳಿದ್ದಾರೆ.