ಬೆಂಗಳೂರು: ಸಾಮಾನ್ಯವಾಗಿ ಮದುವೆ ಮನೆ ಎಂದರೆ ತಮಾಷೆ, ವಧು-ವರರ ಕಾಲೆಳೆಯುವುದು ಸಹಜ. ಆದರೆ ಇಲ್ಲೊಂದು ಮದುವೆಯಲ್ಲಿ ಆಶೀರ್ವಾದವೇ ಉಡುಗೊರೆ ಎಂದು ಆಹ್ವಾನ ಪತ್ರಿಕೆಯಲ್ಲಿ ಹಾಕಿದ್ದಕ್ಕೆ ಅತಿಥಿಗಳು ಕೊಟ್ಟ ಉಡುಗೊರೆ ನೀಡಿ ಎಲ್ಲರೂ ಶಾಕ್ ಆಗಿದ್ದಾರೆ.
ಕೆಲವರು ತಮ್ಮ ಮದುವೆ ಆಹ್ವಾನ ಪತ್ರಿಕೆಯಲ್ಲಿ ಆಶೀರ್ವಾದವೇ ಉಡುಗೊರೆ ಎಂಬ ಒಕ್ಕಣೆ ಹಾಕುವುದಿದೆ. ತಮ್ಮ ಮದುವೆ ಬರುವ ಅತಿಥಿಗಳು ಉಡುಗೊರೆ ವಸ್ತುಗಳನ್ನು ತರುವ ಬದಲು ಖಾಲಿ ಕೈಯಲ್ಲಿ ಬಂದು ಅಕ್ಷತೆ ಕಾಳು ಹಾಕಿ ಹೋದರೆ ಸಾಕು ಎಂಬ ಕಾರಣಕ್ಕೆ ಹೀಗೊಂದು ಒಕ್ಕಣೆ ಹಾಕುತ್ತಾರೆ. ಉಡುಗೊರೆ ಪಡೆಯಲು ಇಷ್ಟವಿಲ್ಲದಿದ್ದರೆ ಈ ರೀತಿ ಹಾಕುವುದು ಸಹಜ.
ಅದೇ ರೀತಿ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ರಘುನಂದನ ಮತ್ತು ಶೈಲಶ್ರೀ ಎಂಬವರ ವಿವಾಹ ಕಾರ್ಯಕ್ರಮ ನಡೆದಿತ್ತು. ಈ ಮದುವೆ ಆಹ್ವಾನ ಪತ್ರಿಕೆಯಲ್ಲಿ ಆಶೀರ್ವಾದವೇ ಉಡುಗೊರೆ ಎಂದು ಒಕ್ಕಣೆ ಬರೆಯಲಾಗಿತ್ತು. ಬರುವ ಅತಿಥಿಗಳು ಉಡುಗೊರೆ ವಸ್ತುಗಳನ್ನು ತರುವುದು ಬೇಡ ಎಂಬ ಕಾರಣಕ್ಕೆ ಈ ರೀತಿ ಬರೆಯಲಾಗಿತ್ತು.
ಆದರೆ ಅಲ್ಲಿಗೆ ಬಂದಿದ್ದ ಕ್ರಿಯಾತ್ಮಕವಾಗಿ ಯೋಚಿಸಿ ಐಡಿಯಾ ಒಂದನ್ನು ಮಾಡಿದ್ದರು. ಒಂದಷ್ಟು ಅತಿಥಿಗಳು ಆಶೀರ್ವಾದ ಆಹಾರ ಬ್ರ್ಯಾಂಡ್ ನ ಗೋದಿ ಹಿಟ್ಟು, ಖಾರದ ಪುಡಿ, ಜೀರಿಗೆ, ಗುಲಾಬ್ ಜಾಮೂನ್ ಇತ್ಯಾದಿ ಪ್ಯಾಕೆಟ್ ಗಳನ್ನು ಒಬ್ಬೊಬ್ಬರಾಗಿ ಬಂದು ವಧು-ವರರಿಗೆ ಉಡುಗೊರೆ ಕೊಟ್ಟರು. ಇದರ ಜೊತೆಗೆ ಬಿತ್ತಿ ಪತ್ರವೊಂದರಲ್ಲಿ Aashirvad ವೇ ಉಡುಗೊರೆ ಎಂದು ಬರೆದುಕೊಟ್ಟಿದ್ದಾರೆ.
ಸಾಲಾಗಿ ಒಬ್ಬೊಬ್ಬರೇ ಆಶೀರ್ವಾದ್ ಪ್ಯಾಕೆಟ್ ಗಳನ್ನು ಹಿಡಿದು ಉಡುಗೊರೆ ಕೊಡಲು ಬಂದಾಗ ವಧು-ವರ ಸೇರಿದಂತೆ ನೆರೆದಿದ್ದವರಿಗೆ ನಗುವೋ ನಗು. ಆಹ್ವಾನ ಪತ್ರಿಕೆಯಲ್ಲಿ ಬರೆದಿದ್ದ ಒಕ್ಕಣೆಯನ್ನು ಈ ಯುವ ಸಮೂಹ ತಮ್ಮ ಕ್ರಿಯಾತ್ಮಕತೆ ಉಪಯೋಗಿಸಿ ವಿನೂತನ ಐಡಿಯಾ ಮಾಡಿದೆ. ಇದರಿಂದ ಮದುವೆ ಮನೆಯಲ್ಲಿ ನಗು ಮೂಡಿದೆ. ಈ ವಿಡಿಯೋ, ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದೆ.