ಮುಖ್ಯಮಂತ್ರಿ ಹುದ್ದೆಗೆ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಕೊಟ್ಟಿದ್ದೆಷ್ಟು: ಆರ್ ಅಶೋಕ್ ನೀಡಿದ ಲೆಕ್ಕ

Krishnaveni K

ಸೋಮವಾರ, 22 ಜುಲೈ 2024 (14:02 IST)
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪಗಳ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಪಟ್ಟಕ್ಕೇರಲು ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಎಷ್ಟು ಕೋಟಿ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪಗಳನ್ನು ಉಲ್ಲೇಖಿಸಿ ಆರ್ ಅಶೋಕ್ ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸರ್ಕಾರದಲ್ಲಿ ಎಲ್ಲದಕ್ಕೂ ರೇಟ್ ಫಿಕ್ಸ್ ಆಗಿದೆ. ನೀವು ಸಿಎಂ ಆಗುವುದಕ್ಕೆ ರಾಹುಲ್ ಗಾಂಧಿಯವರು ಎಷ್ಟು ರೇಟ್ ಫಿಕ್ಸ್ ಮಾಡಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.

‘ಎಲ್ಲದಕ್ಕೂ ರೇಟ್ ಫಿಕ್ಸ್! ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆ ಎಷ್ಟು ಸಾಂಸ್ಥಿಕ ರೂಪ ಪಡೆದಿದೆ ಎಂದರೆ ಅಬಕಾರಿ ಇಲಾಖೆಯಲ್ಲಿ ಪೇದೆಯಿಂದ ಹಿಡಿದು ಉಪ ಆಯುಕ್ತ ಹುದ್ದೆವರೆಗೆ 5 ಲಕ್ಷ ರೂಪಾಯಿಯಿಂದ 3.5 ಕೋಟಿ ರೂ.ವರೆಗೆ ಲಂಚ ಫಿಕ್ಸ್ ಆಗಿದೆ. ಅಂದ ಹಾಗೆ ನಿಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಹುಲ್ ಗಾಂಧಿಯವರು ಎಷ್ಟು ರೇಟ್ ಫಿಕ್ಸ್ ಮಾಡಿದ್ದರು ಸಿದ್ದರಾಮಯ್ಯನವರೇ’ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಇಂತಿಷ್ಟು ಎಂದು ವರ್ಗಾವಣೆ ರೇಟ್ ಫಿಕ್ಸ್ ಆಗಿರುವ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿತ್ತು. ಇದನ್ನು ಉಲ್ಲೇಖಿಸಿ ಆರ್ ಅಶೋಕ್ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ