ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಪೋರೇಟರ್ ಪುತ್ರಿ ನೇಹಾಳನ್ನು ಪಾಪಿ ಫಯಾಜ್ ಹತ್ಯೆ ಮಾಡುವ ಸಂದರ್ಭದ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಇದನ್ನು ನೆಟ್ಟಿಗರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಎದುರಿನಿಂದ ಬಂದ ಫಯಾಜ್ ಗೆ ನೇಹಾ ಬೇಡ ಬೇಡ ಎಂದು ಹಿಂದೆ ಸರಿಯುತ್ತಾ ಪರಿ ಪರಿಯಾಗಿ ಕೇಳಿಕೊಳ್ಳುತ್ತಾಳೆ. ಆಗ ಆಕೆಯ ಅಕ್ಕಪಕ್ಕ ಜನರ ಓಡಾಟವಿರುತ್ತದೆ. ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ಕೃತ್ಯ ನಡೆದಿಲ್ಲ. ಆಕೆ ಬೇಡ ಬೇಡ ಎಂದು ಹಿಂದೆ ಸರಿಯುತ್ತಿದ್ದಂತೇ ಹಂತಕ ಫಯಾಜ್ ಚಾಕುವಿನಿಂದ ಮುಖ ಮೂತಿ ನೋಡದೇ ಚುಚ್ಚುತ್ತಾನೆ. ಆಕೆ ಕೆಳಕ್ಕೆ ಬಿದ್ದರೂ ಬಿಡದೇ ಪದೇ ಪದೇ ಚುಚ್ಚುತ್ತಾನೆ.
ಫಯಾಜ್ ಆಕೆಗೆ ಒಂದು ಬಾರಿ ಇರಿದ ತಕ್ಷಣವೇ ಆಕೆ ಕೆಳಕ್ಕೆ ಬೀಳುತ್ತಾಳೆ. ಆಗಲೇ ಅಲ್ಲಿ ಎರಡು ಮೂರು ಜನ ಓಡಿ ಬರುವುದು ಸಿಸಿಟಿವಿ ದೃಶ್ಯದಲ್ಲಿ ಕಾಣುತ್ತದೆ. ಆದರೆ ಅವರು ಯಾರೂ ಆತನ ಪಕ್ಕಕ್ಕೆ ಹೋಗುವುದಿಲ್ಲ. ಆತ ಇರಿದು ಓಡಿ ಹೋಗುವಾಗ ಆತನ ಹಿಂದೆ ಹಿಡಿಯಲು ಓಡುತ್ತಾರೆ. ಆದರೆ ನೆಲಕ್ಕೆ ಬಿದ್ದ ನೇಹಾ ಅಲ್ಲಿಯೇ ಪ್ರಾಣ ಬಿಡುತ್ತಾಳೆ.
ಈ ದೃಶ್ಯವನ್ನು ನೋಡಿದ ನೆಟ್ಟಿಗರು, ಆಕೆಗೆ ಚುಚ್ಚುವ ಸಂದರ್ಭದಲ್ಲಿ ಅಲ್ಲಿದ್ದ ಮೂವರು ಒಂದೊಂದು ಕಲ್ಲು ಎತ್ತಿ ಎಸೆದಿದ್ದರೂ ಆತ ಬಹುಶಃ ಪರಾರಿಯಾಗುತ್ತಿದ್ದ. ಆ ಹೆಣ್ಣು ಮಗಳ ಜೀವ ಉಳಿಸಬಹುದಿತ್ತೇನೋ. ಆದರೆ ಅಲ್ಲಿದ್ದವರೆಲ್ಲವೂ ಹತ್ತಿರವೂ ಹೋಗದೇ ನೋಡುತ್ತಾ ನಿಂತಿದ್ದಾರೆ. ಹೀಗೆ ಮಾಡಲು ಮನಸ್ಸಾದರೂ ಹೇಗೆ ಬಂತು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಕಿಡಿ ಕಾರಿದ್ದಾರೆ. ಬಹುಶಃ ಹಂತಕನ ಕೃತ್ಯ ನೋಡಿ ಗಾಬರಿಗೊಂಡು ಏನು ಮಾಡಲೂ ತೋಚದೇ ಈ ರೀತಿ ಮಾಡಿರಬಹುದು ಎಂದೂ ಕೆಲವರು ಸಮರ್ಥಿಸಿಕೊಂಡಿದ್ದಾರೆ. ಆದರೆ ನಾಳೆ ನಮ್ಮ ಮಕ್ಕಳಿಗೂ ಇದೇ ಗತಿಯಾಗಬಹುದು. ಈ ರೀತಿ ಒಬ್ಬ ದಾಳಿ ಮಾಡುವಾಗ ಯಾಕೆ ಯಾರೂ ಸಹಾಯಕ್ಕೆ ಧಾವಿಸುವ ಮನಸ್ಥಿತಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.