ಹುಬ್ಬಳ್ಳಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಎನ್ ಕೌಂಟರ್ ಮಾಡಿರುವ ಪೊಲೀಸರ ಕ್ರಮ ಸರಿಯಾಗಿತ್ತೇ ಎಂಬ ಬಗ್ಗೆ ಈಗ ತನಿಖೆ ನಡೆಸಲು ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ.
ಭಾನುವಾರ ಹುಬ್ಬಳ್ಳಿಯಲ್ಲಿ ಬಿಹಾರ ಮೂಲದ ರಿತೇಶ್ ಕುಮಾರ್ ಎಂಬಾತ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ಆತನನ್ನು ಹಿಡಿದುಕೊಂಡು ಬರುವಾಗ ಪೊಲೀಸರ ಮೇಲೆಯೇ ದಾಳಿಗೆ ಮುಂದಾಗಿದ್ದ ಕಾರಣಕ್ಕೆ ಲೇಡಿ ಪಿಎಸ್ಐ ಅನ್ನಪೂರ್ಣ ಆರೋಪಿ ಮೇಲೆ ಗುಂಡು ಹಾರಿಸಿದ್ದರು. ಇದರಿಂದಾಗಿ ಆತ ಸಾವನ್ನಪ್ಪಿದ್ದ.
ಘಟನೆ ಬಳಿಕ ಸಾರ್ವಜನಿಕರಿಂದ ಪಿಎಸ್ಐ ಅನ್ನಪೂರ್ಣ ಮತ್ತು ತಂಡಕ್ಕೆ ಭಾರೀ ಅಭಿನಂದನೆ ವ್ಯಕ್ತವಾಗಿದೆ. ಆದರೆ ನಿಜವಾಗಿಯೂ ಆರೋಪಿ ಮೇಲೆ ಗುಂಡು ಹಾರಿಸುವ ಅಗತ್ಯವಿತ್ತೇ ಎಂಬ ಬಗ್ಗೆ ಈಗ ತನಿಖೆ ನಡೆಯಲಿದೆ.
ಈ ಬಗ್ಗೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಎನ್ ಕೌಂಟರ್ ನಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ದೂರವಾಣಿ ಕರೆ ಪರಿಶೀಲನೆ ಮಾಡಬೇಕು, ವಿವರವಾದ ತನಿಖೆಯಾಗಬೇಕು. ಅಲ್ಲಿಯವರೆಗೆ ಮೃತನ ಅಂತ್ಯಕ್ರಿಯೆ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ಗೆ ಸಿವಿಲ್ ಲಿಬರ್ಟೀಸ್ ಸಂಸ್ಥೆ ಮನವಿ ಸಲ್ಲಿಸಿದೆ.