ಚಿಕ್ಕಮಗಳೂರು : ನನ್ನ ಕ್ಷೇತ್ರದಲ್ಲಿ ನನ್ನನ್ನ ಸೋಲಿಸಲು ಡೀಲ್ ಹಾಗೂ ಚಕ್ರವ್ಯೂಹ ರಚಿಸಿದ್ದಾರೆ. ಅದನ್ನು ಭೇದಿಸಲು ನಾನು ಅಭಿಮನ್ಯು ಅಲ್ಲ, ಅರ್ಜುನನಾಗಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಟಾಂಗ್ ನೀಡಿದರು.
ಜಿಲ್ಲೆಯ ಶೃಂಗೇರಿಯ ಗೌರಿಶಂಕರ್ ಸಭಾಂಗಣದಲ್ಲಿ ಬಿಜೆಪಿ ಆಯೋಜಿಸಿದ್ದ ಚುನಾವಣಾ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಡಿ.ಎನ್.ಜೀವರಾಜ್ ಪರ ಮತಯಾಚನೆ ಮಾಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚುನಾವಣೆ ರಾಜಕೀಯ ಕುರುಕ್ಷೇತ್ರವಿದ್ದಂತೆ. ಅದರಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತೊಡಗಿಕೊಳ್ಳುತ್ತವೆ ಎಂದರು.
ಈ ಬಾರಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಗೆದ್ದು, ಅಧಿಕಾರಕ್ಕೆ ಬರಲು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಗೂಟ ಹೊಡೆದುಕೊಂಡು ಶ್ರಮಿಸಬೇಕು. ಡಬಲ್ ಇಂಜಿನ್ ಸರ್ಕಾರದ ಸಾಧನೆಯೇ ನಮ್ಮ ಗೆಲುವಿಗೆ ಶ್ರೀರಕ್ಷೆ. ನಮ್ಮ ಪಕ್ಷದ ನಿಲುವು ದೇಶ ಮೊದಲು, ನಮ್ಮ ನೀತಿ ಹಿಂದುತ್ವ. ಜಾತಿಗಳ ನಡುವೆ ವಿಷ ಬೀಜವನ್ನು ಬಿತ್ತುವುದು, ವಂಶ ಪಾರಂಪರ್ಯವಾಗಿ ಆಡಳಿತ ನಡೆಸುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಧ್ಯೇಯವಾಗಿದೆ ಎಂದು ಕಾಂಗ್ರೆಸ್-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.