ಶಿವಮೊಗ್ಗ: ಬಿಜೆಪಿ ಪಕ್ಷದಲ್ಲಿ ಇನ್ಮುಂದೆ ನನಗೂ, ನನ್ನ ಮಗನಿಗೂ ಭವಿಷ್ಯವಿಲ್ಲ ಎಂದು ತೀರ್ಮಾನಿಸಿಯೇ ಸ್ವತಂತ್ರ್ಯ ಅಭ್ಯರ್ಥಿಯಾಗಿ ಶಿವಮೊಗ್ಗದಲ್ಲಿ ಕಣಕ್ಕಿಳಿದಿರುವುದು ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಅವರ ಮಕ್ಕಳಾದ ಬಿ.ವೈ ವಿಜಯೇಂದ್ರ ಹಾಗೂ ಬಿ ವೈ ರಾಘವೇಂದ್ರ ಅವರು ಹಿಂದುತ್ವ ಬಿಟ್ಟು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ತಮಗೆ ಬೇಕಾದವರಿಗೆ ಟಿಕೆಟ್ ನೀಡಿ, ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದರು.
ಜೆಡಿಎಸ್ ಪಕ್ಷದ ಜತೆ ಮೈತ್ರಿಯಾದರೇ, ಯಡಿಯೂರಪ್ಪ ಹಾಗೂ ಅವರ ಮಕ್ಕಳು ಯಾರ ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆಂದು ಉತ್ತರಿಸಬೇಕೆಂದರು.
ಒಳ ಒಪ್ಪಂದ ವ್ಯವಸ್ಥೆ ಬಿಜೆಪಿಯಲ್ಲಿ ಇರಲಿಲ್ಲ. ನಾವು ನೇರವಾಗಿ ಕಾಂಗ್ರೆಸ್ ಗೆ ಸೆಡ್ಡು ಹೊಡೆದು 108 ಸೀಟು ಪಡೆದಿದ್ದೆವು. ಹಿಂದುತ್ವ ವಿಚಾರ ಪಕ್ಕಕ್ಕೆ ಸರಿಸಿ, ಜಾತಿ ರಾಜಕಾರಣ ಮತ್ತು ಒಳ ಒಪ್ಪಂದಿಂದಾಗಿ 60ಕ್ಕೆ ಬಂದು ಬಿಜೆಪಿ ತಲುಪಿದೆ. ಹೀಗೆ ಮುಂದುವರಿದರೆ ರಾಜ್ಯದಲ್ಲಿ ದೊಡ್ಡ ಆಘಾತ ಆಗಲಿದೆ ಎಂದರು.
ಈಶ್ವರಪ್ಪ ಅಂದರೆ ಯಾರು ಎಂದು ನನಗೆ ಗೊತ್ತಿಲ್ಲ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಅವರು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಯಾರೆಂದು ಗೊತ್ತಿಲ್ಲವೆಂದ ಮೇಲೆ ಈ ಹಿಂದೆ ನನ್ನ ಮನೆಗೇಕೆ ಬಂದಿದ್ದರು ಎಂದು ಪ್ರಶ್ನಿಸಿದರು.