ನಾನು ಬದುಕಲು ಸಾಧ್ಯವಾಗದಂಥ ದಾಖಲೆ ಇದ್ರೆ ಬಿಡುಗಡೆ ಮಾಡಲಿ: ಎಚ್‌ಡಿಕೆಗೆ ಶಿವಕುಮಾರ್ ಸವಾಲು

Sampriya

ಶನಿವಾರ, 10 ಆಗಸ್ಟ್ 2024 (17:44 IST)
ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಕುಮಾರಸ್ವಾಮಿ ಟೀಕೆಗಳನ್ನು ಸಹಿಸಿಕೊಂಡು ಸಾಕಾಗಿ ಹೋಗಿದೆ. ಕುಮಾರಸ್ವಾಮಿಯ ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

ಇಂದು ಮಾಧ್ಯಮದವರ ಜತೆ ಮಾತನಾಡಿದ ಅವರು, ನಿಖಿಲ್ ಸೋಲಿನ ನಂತರ ಕುಮಾರಸ್ವಾಮಿ ಅವರ ಮಾತು ಮಿತಿ ಮೀರಿದೆ. ನಾನು ಎಷ್ಟು ದಿನ ಸಹಿಸಲಿ. ಅವರ ಹೇಳಿಕೆಗಳಿಗೆ ನಾನು ಉತ್ತರ ನೀಡಿದ್ದೇನೆ. ನನ್ನ ವಿರುದ್ಧ ಇರುವ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.

ನಾನು ವಿಧವೆಯರಿಗೆ ಗನ್ ಪಾಯಿಂಟ್‌ ಇಟ್ಟು ಆಸ್ತಿ ಬರೆಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ. ಹಾಕಿದ್ದರೆ ಅವರೆಲ್ಲರನ್ನು ಕರೆದುಕೊಂಡು ಬಂದು ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಿ. ನನ್ನ ವಿರುದ್ಧ ಇರುವ ದಾಖಲೆಗಳನ್ನು ಬಿಚ್ಚಿಡಲಿ ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರ ದುರುಪಯೋಗ ಮಾಡಿ ನನ್ನ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.  ಅದೆಲ್ಲವನ್ನು ಮರೆತು ಅವರು ಮುಖ್ಯಮಂತ್ರಿಯಾಗಲು ನೆರವಾಗಿದ್ದೆ. ಆನಂತರ ನಡೆದ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ ಎಂದರು.

ನಾನು ಪ್ರಧಾನಿ, ಮುಖ್ಯಮಂತ್ರಿಯ ಮಗನಾಗಿ ರಾಜಕೀಯಕ್ಕೆ ಬಂದಿಲ್ಲ. ನಾನೊಬ್ಬ ಮಧ್ಯಮ ವರ್ಗದ ಕುಟುಂಬದವನಾಗಿ ರಜಕೀಯ ಬಂದಿದ್ದು, ನನ್ನ ಆಸ್ತಿ ಮಾಹಿತಿ ತೆರೆದ ಪುಸ್ತಕದಂತೆ. ನಾನು ಬದುಕಲು ಸಾಧ್ಯವಾಗದಂಥ ದಾಖಲೆ ಏನಿದೆಯೋ ಅದನ್ನು ಬಿಚ್ಚಿಡಲಿ. ನಾನು ಮಾಡಬಾರದ ತಪ್ಪು ಏನು ಮಾಡಿದ್ದೇನೆ ತಿಳಿಸಲಿ‌ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ