ಬೆಂಗಳೂರು: ಈ ಹಿಂದೆ ಬಿಜೆಪಿ ಹಗರಣಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡಿರುವ ಎಚ್ ಡಿ ಕುಮಾರಸ್ವಾಮಿ ಅವರು ಇದೀಗ ಅದೇ ಬಿಜೆಪಿಯ ಶಾಲನ್ನು ಹೆಗಲೇರಿಸಿಕೊಂಡು ಅವರೊಂದಿಗೆ ಹೆಜ್ಜೆ ಹಾಕುತ್ತಿರುವುದು ಅಸಹ್ಯದ ಪರಮಾವಧಿಯಲ್ಲವೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ವಾಲ್ಮೀಕಿ, ಮುಡಾ ಹಗರಣದ ವಿರುದ್ಧ ಬಗ್ಗೆ ಬಿಜೆಪಿ ಕೈಗೊಂಡಿದ್ದ ಪಾದಯಾತ್ರೆಗೆ ರಾತ್ರಿ ವಿರೋಧ ವಕ್ತಪಡಿಸಿದ್ದ ಕುಮಾರಸ್ವಾಮಿ ಅವರು ಬೆಳಿಗ್ಗೆ ಪಾದಯಾತ್ರೆಗೆ ಹಾಜರಾಗಿ, ಬಿಜೆಪಿ ಜತೆ ಕೈಜೋಡಿಸಿದ್ದರು. ಇದೀಗ ಈ ಸಂಬಂಧ ಎಚ್ ಡಿ ಕುಮಾರಸ್ವಾಮಿ ಅವರು ಈ ಹಿಂದೆ ಬಿಜೆಪಿ ಭಷ್ಟಚಾರದ ಪಟ್ಟಿ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಮಾಡಿದ ಪೋಸ್ಟ್‌ನಲ್ಲೇನಿದೆ:
ಮಾನ್ಯ ಬ್ರದರ್ ಸ್ವಾಮಿಗಳೇ, ಆಕಾಶಕ್ಕೆ ಕೊನೆ ಇಲ್ಲ, ನಿಮ್ಮ ಡಬಲ್ ಸ್ಟ್ಯಾಂಡರ್ಡ್ ಗೆ ಮಿತಿ ಇಲ್ಲ!
ಬಿಜೆಪಿಯಿಂದ ವಚನಭ್ರಷ್ಟ ಎನಿಸಿಕೊಂಡು, ಬಿಜೆಪಿಯೊಂದಿಗೆ ಇನ್ನೆಂದಿಗೂ ಮೈತ್ರಿ ಇಲ್ಲ ಎಂದು ಜನರ ಕಿವಿ ಮೇಲೆ ಲಾಲ್ ಬಾಗ್ ಇಟ್ಟು, ಬಿಜೆಪಿಯ ಹಗರಣಗಳ ಬಗ್ಗೆ ಪುಂಖಾನುಪುಂಖವಾಗಿ ಮಾತಾಡಿ ಈಗ ನಾಚಿಕೆ ಬಿಟ್ಟು ಅದೇ ಬಿಜೆಪಿಯ ಶಾಲನ್ನು ಹೆಗಲೇರಿಸಿ, ಅದೇ ಬಿಜೆಪಿಯೊಂದಿಗೆ ಹೆಜ್ಜೆ ಹಾಕುತ್ತಿರುವುದು ಅಸಹ್ಯದ ಪರಮಾವಧಿಯಲ್ಲವೇ?
ರಾತ್ರಿ ಪಾದಯಾತ್ರೆಗೆ ವಿರೋಧ, ಬೆಳಗ್ಗೆ ಪಾದಯಾತ್ರೆಗೆ ಹಾಜರ್!
ಗಂಟೆಗೊಂದು ಕಡೆ, ಗಳಿಗೆಗೊಂದು ಕಡೆ ನಾಲಿಗೆ ತಿರುಗಿಸುತ್ತಾ ನಿರ್ಲಜ್ಜ ರಾಜಕಾರಣ ಮಾಡುವ ತಾವು ಕರ್ನಾಟಕದ ರಾಜಕೀಯ ವಿದೂಷಕರಾಗಿದ್ದೀರಿ.
ಎಚ್ ಡಿ ಕುಮಾರಸ್ವಾಮಿ ಅವರೇ, ಈ ಹಿಂದೆ ನೀವೇ ಕೊಟ್ಟಿರುವ ಬಿಜೆಪಿ ಭ್ರಷ್ಟಾಚಾರದ ಪಟ್ಟಿ ಮರೆತು ಹೋಯ್ತೆ?
ನೀವು ಯಾರನ್ನು ಭ್ರಷ್ಟರು ಎಂದಿದ್ದಿರೋ ಅದೇ ಭ್ರಷ್ಟರೊಂದಿಗೆ ಹೆಜ್ಜೆ ಹಾಕುತ್ತಿರುವುದು ಪರಮ ನಾಚಿಕೆಗೇಡಿನ ರಾಜಕಾರಣವಲ್ಲವೇ?
ಅಧಿಕಾರಕ್ಕಾಗಿ ಯಾವ ಕೆಳ ಹಂತಕ್ಕೂ ಇಳಿಯಬಲ್ಲೆ ಎಂದು ನಿರಂತರವಾಗಿ ನಿರೂಪಿಸುತ್ತಿರುವ ಕುಮಾರಸ್ವಾಮಿಯವರಿಗೆ ಉತ್ತರಿಸುವ ನೈತಿಕತೆ ಇದೆಯೇ?