ರೌಡಿಗಳು ಬಾಲ ಬಿಚ್ಚಿದರೆ ನಂಗೆ ಹೇಳಿ ಎಂದ ಐಜಿಪಿ

ಶನಿವಾರ, 4 ಆಗಸ್ಟ್ 2018 (17:50 IST)
ಪುಡಿರೌಡಿ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಪೊಲೀಸರು ಸದಾ ಸನ್ನದ್ಧರಾಗಿದ್ದಾರೆ. ಯಾವುದೇ ರೌಡಿ ಬಾಲ ಬಿಚ್ಚಿದರೆ ನನಗೆ ಹೇಳಿ ಎಂದು ಉತ್ತರ ವಲಯ ಐಜಿಪಿ ಜನರಲ್ಲಿ ಮನವಿ ಮಾಡಿದ್ದಾರೆ.

ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಮತ್ತೆ ಯಾವುದೇ ರೌಡಿ ಬಾಲ ಬಿಚ್ಚಿದರೆ, ಇಲ್ಲವೇ ಏನಾದ್ರೂ ಗುಂಡಾಗಿರಿ ಮಾಡಿದ್ರೆ ನಂಗೆ ಹೇಳಿ ಎಂದು  ಬೆಳಗಾವಿಯ ಉತ್ತರ ವಲಯ ಐಜಿಪಿ ಅಲೋಕಕುಮಾರ  ಮನವಿ ಮಾಡಿದ್ದಾರೆ.

ಧಾರವಾಡ ಡಿ.ಎ.ಆರ್. ಪರೇಡ್ ಮೈದಾನದಲ್ಲಿ ಪೊಲೀಸ್ ತರಬೇತಿ ಶಾಲೆ ಆಯೋಜಿಸಿದ್ದ 20ನೇ ತಂಡದ ತಾತ್ಕಾಲಿಕ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದರು.

ನನ್ನ ವಲಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ಯಾವ ರೌಡಿಯೂ ಈಗ ಬಾಲ ಬಿಚ್ಚಿಲ್ಲ. ಅಲ್ಪಸ್ವಲ್ಪ ಬಾಲ ಬಿಚ್ಚಿದವರೆಲ್ಲ ಈಗ ಒಳಗಡೆ ಇದ್ದಾರೆ. ಮುಂದೆಯೂ ಕೂಡ ಅಷ್ಟೇ ಮಾಡ್ತಿನಿ ಎಂದು ಖಡಕ್ ವಾರ್ನಿಂಗ್ ಮಾಡಿದರು.

ಖಾಕಿ ಸಮವಸ್ತ್ರ ಹಾಕಿಕೊಂಡ  ಪೊಲೀಸರು‌ ಶಿಸ್ತು ಪಾಲನೆ ಮಾಡಬೇಕು. ಪೊಲೀಸರು  ತ್ಯಾಗ ಮಾಡೋಕು ಸಿದ್ಧರಾಗಿ‌ ಇರಬೇಕು. ತಮ್ಮ ಜೀವ ಕೊಡೊಕೆ ಸಿದ್ಧರಾಗಿಯೇ ಪೊಲೀಸ್ ಇಲಾಖೆಗೆ ಬರಬೇಕು. ಪೊಲೀಸರು ಶಿಸ್ತು, ಸಂಯಮದ ‌ಜೊತೆ ಸಾರ್ವಜನಿಕರ‌ ಜೊತೆ ಸಜ್ಜ‌ನಿಕೆ ತೋರಿಸಬೇಕು ಎಂದರು.

ಸಿಆರ್‌ಪಿಎಫ್‌ ದಂತಹ ಪಡೆಗಳು ಮತ್ತು ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲೇ ಪೊಲೀಸರ ನಿರ್ಗಮನ ಪಥ ಸಂಚಲನ ಆಗಬೇಕಿದೆ. ಅಲ್ಲಿ ನಡೆಯುವಂತೆಯೇ ನಮ್ಮ‌ಪೊಲೀಸ್ ಪ್ರಶಿಕ್ಷಾಣಾರ್ಥಿಗಳು ಸಹ ಇನ್ನಷ್ಟು ಗಟ್ಟಿಮುಟ್ಟಾದ ಪರೇಡ್ ಮಾಡುವಂತಾಗಬೇಕು. ಇದನ್ನು ನಮ್ಮಲ್ಲಿಯೂ ಜಾರಿಗೆ ತರಲು ಚಿಂತನೆ ನಡೆಸಿದ್ದೇವೆ ಎಂದು ಐಜಿಪಿ ಅಲೋಕಕುಮಾರ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ