ಕಾಂಗ್ರೆಸ್ ಪ್ರಭಾವಿ ಶಾಸಕರ ಕ್ಷೇತ್ರದಲ್ಲಿ ಸ್ಮಶಾನ ಭೂಮಿಗೆ ಪರದಾಟ!
ಶನಿವಾರ, 4 ಆಗಸ್ಟ್ 2018 (16:54 IST)
ಆ ಗ್ರಾಮದಲ್ಲಿ ಸುಮಾರು 5 ಸಾವಿರ ಜನರು ವಾಸಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಹ ಇದೆ. ಆದರೆ ಸ್ಮಶಾನ ಇಲ್ಲದ ಕಾರಣ ಸತ್ತ ನಂತರ ಶವಗಳ ಅಂತ್ಯ ಸಂಸ್ಕಾರ ಮಾಡುವುದು ಗ್ರಾಮದಲ್ಲೆ ಇರುವ ರಸ್ತೆ ಎರಡು ಬದಿಗಳಲ್ಲಿ ಎಂದರೆ ನಂಬಲೇಬೇಕು. ಅಂದ್ಹಾಗೆ ಈ ಕ್ಷೇತ್ರದ ಶಾಸಕರು ಪ್ರಭಾವಿ ಕಾಂಗ್ರೆಸ್ ಮುಖಂಡರು ಎನ್ನುವುದು ವಿಶೇಷ.
ಬೆಳಗಾವಿ ಜಿಲ್ಲೆಯ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಆಡಳಿತ ಸರ್ಕಾರದ ಪ್ರಭಾವಿ ಮಹಿಳೆ ಮತ್ತು ಈ ಕ್ಷೇತ್ರದ ಶಾಸಕರು ಆದ ಲಕ್ಷ್ಮಿ ಹೆಬ್ಬಾಳ್ಕರ್ ರವರ ವ್ಯಾಪ್ತಿಯಲ್ಲಿ ಬರುವ ಕುಕ್ಕಡೊಳ್ಳಿ ಗ್ರಾಮದ ಸಮಸ್ಯೆ. ಮನೆಯ ಹಿಂಭಾಗದ ಜಾಗಗಳಲ್ಲಿ, ಕೆರೆ ಕಟ್ಟೆಯ ಮೇಲ್ಬಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಪದೇ ಪದೇ ಈ ಗ್ರಾಮದ ಗ್ರಾಮಸ್ಥರು ಸ್ಮಶಾನ ಮಂಜೂರು ಮಾಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಅವರ ಆಶ್ವಾಸನೆ ಗಳು ಆಗೇ ಉಳಿದಿವೆ. ಇಲ್ಲಿ ವಾಸಿಸುವ ಜನ ಬಹುತೇಕ ಕಟ್ಟಡ ಕಟ್ಟುವ ಕಾರ್ಮಿಕರೇ ಹೆಚ್ಛಾಗಿ ವಾಸಿಸುತ್ತಿದ್ದಾರೆ.
ಶವಗಳನ್ನು ಗ್ರಾಮದ ರಸ್ತೆ ಅಕ್ಕ ಪಕ್ಕದ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡುವುದರಿಂದ ರಾತ್ರಿ ವೇಳೆಯಲ್ಲಿ ಗ್ರಾಮದಲ್ಲಿ ಸಂಚರಿಸುವುದಕ್ಕೆ ಇಲ್ಲಿನ ಗ್ರಾಮಸ್ಥರು ಭಯಪಡುತ್ತಿದ್ದಾರೆ. ನಿತ್ಯ ಜೀವ ಕೈಯಲ್ಲಿ ಹಿಡಿದು ಭಯದಿಂದಲೇ ಜನರು ಬದುಕು ಸಾಗಿಸುತ್ತಿದ್ದಾರೆ.