ಅಕ್ರಮ ವಾಸ್ತವ್ಯ ನೈಜೀರಿಯಾ ವಿದ್ಯಾರ್ಥಿನಿ ಗಡಿಪಾರು

ಮಂಗಳವಾರ, 22 ಮೇ 2018 (15:52 IST)
ವೀಸಾ ಅವಧಿ ಮುಗಿದ ನಂತರವೂ ಭಾರತದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ ನೈಜೀರಿಯಾ ದೇಶದ ವಿದ್ಯಾರ್ಥಿನಿಯನ್ನು ಉಡುಪಿ ನ್ಯಾಯಾಲಯದ ಆದೇಶದಂತೆ ಆಕೆಯ ದೇಶಕ್ಕೆ ಗಡಿಪಾರು ಮಾಡಲಾಗಿದೆ.
ನೈಜೀರಿಯಾ ದೇಶದ ಉಯು ಎನ್ಸಾ ಜೆರಿ ಡೇವಿಸ್ ಎಂಬಾಕೆ 2011ರಿಂದ ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಬಿಎ ಎಲ್ಎಲ್ ಬಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ವೀಸಾ ಅವಧಿಯು 2012ರ ಜೂ.14ಕ್ಕೆ ಮುಕ್ತಾಯವಾಗಿದ್ದು, ಅನಂತರ ಆಕೆ ತನ್ನ ವೀಸಾವನ್ನು ವಿದೇಶಿಯರ ನೋಂದ ಣಾಧಿಕಾರಿಯವರ ಕಚೇರಿಯಲ್ಲಿ 2015ರ ಡಿ.27ರವರೆಗೆ ವಿಸ್ತರಣೆ ಮಾಡಿ ಕೊಂಡಿದ್ದರು. ನಂತರ ಆಕೆ ವಾಸ ವಿಸ್ತರಣೆ ಕುರಿತು ಅರ್ಜಿ ಸಲ್ಲಿಸದೆ ಭಾರತದಲ್ಲಿ ಅನಧಿಕೃತವಾಗಿ ವಾಸವಾಗಿದ್ದರು.
 
ಈ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿ 2018ರ ಎ.30ರಂದು ಆಕೆಯನ್ನು ಬಂಧಿಸಿ, ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ ಆಕೆಗೆ ಎ.30ರಿಂದ ಮೇ 11ರವರೆಗೆ ಸಾದಾ ಶಿಕ್ಷೆ ಹಾಗೂ 10,000ರೂ. ದಂಡ ವಿಧಿಸಿ ಆಕೆಯನ್ನು ಭಾರತದಿಂದ ನೈಜೀರಿಯ ದೇಶಕ್ಕೆ ಗಡಿಪಾರು ಮಾಡುವಂತೆ ಆದೇಶ ನೀಡಿತ್ತು. 
 
ಈ ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ನಿರ್ದೇಶನದಂತೆ ಮಣಿಪಾಲ ಪೊಲೀಸ್ ನಿರೀಕ್ಷಕರು ತನಿಖೆ ನಡೆಸಿ, ಉಯು ಎನ್ಸಾ ಜೆರಿ ಡೇವಿಸ್ಳನ್ನು ಮೇ 18ರಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದರು. ಮೇ 19ರಂದು ಆಕೆಯನ್ನು ಭಾರತದಿಂದ ಆಕೆಯ ಮಾತೃ ದೇಶಕ್ಕೆ ಗಡಿಪಾರು ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ