ಅಕ್ರಮ ಮರಳು ಸಂಗ್ರಹಣೆ: ಜಮೀನು ಮಾಲೀಕರ ಮೇಲೆ ಕೇಸ್ ದಾಖಲಿಸಲು ಸಚಿವರ ಖಡಕ್ ಸೂಚನೆ
ಭಾನುವಾರ, 4 ನವೆಂಬರ್ 2018 (18:30 IST)
ಕಲಬುರಗಿ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿಟ್ಟುಕೊಂಡಿರುವಂತಹ ಜಮೀನುಗಳ ಮಾಲೀಕರ ಮೇಲೆ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಂದಾಯ, ಪೊಲೀಸ್, ಲೋಕೋಪಯೋಗಿ, ಅರಣ್ಯ, ಆರ್.ಟಿ.ಓ ಇಲಾಖೆಗಳ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಬುರಗಿ ಜಿಲ್ಲೆಯ ವಿವಿಧೆಡೆ ವ್ಯಾಪಕವಾಗಿ ಅಕ್ರಮ ಮರಳು ಸಾಗಣೆ ಮತ್ತು ಸಂಗ್ರಹಣೆ ಕುರಿತು ದೂರು ಕೇಳಿಬರುತ್ತಿವೆ.
ಮುಂದಿನ 2-3 ದಿನಗಳಲ್ಲಿ ಅಕ್ರಮ ಸಂಗ್ರಹಣೆ ಸ್ಥಳಗಳಿಗೆ ಸಹಾಯಕ ಆಯುಕ್ತರು, ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಸಂಬಂಧಿಸಿದ ಜಮೀನು ಮಾಲೀಕರ ಮೇಲೆ ಹಾಗೂ ಟ್ರ್ಯಾಕ್ಟರ್, ಟಿಪ್ಪರ್ ಮಾಲೀಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕೇಸ್ ದಾಖಲಿಸಿ ನವೆಂಬರ್ 5ರೊಳಗೆ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.