ಮಹಿಳೆಯರಿಗೆ ₹2ಸಾವಿರ ನೀಡುವ ಬದಲು ಬದುಕಿಗೆ ಗ್ಯಾರಂಟಿ ನೀಡಲಿ: ಆರ್‌ ಅಶೋಕ್‌

Sampriya

ಗುರುವಾರ, 2 ಜನವರಿ 2025 (19:30 IST)
ಬೆಂಗಳೂರು: ಕಾಂಗ್ರೆಸ್‌ನವರು ಮಹಿಳೆಯರಿಗೆ ₹2ಸಾವಿರ ನೀಡುವ ಬದಲು ಬಾಣಂತಿಯರ ಬದುಕಿಗೆ ಗ್ಯಾರಂಟಿ ನೀಡಿದರೆ ಸಾಕು ಎಂದ ವಿಪಕ್ಷ ನಾಯಕ ಆರ್‌ ಅಶೋಕ್‌ ಅವರು ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಾಣಂತಿಯರ ಮರಣ ಮೃದಂಗ ಇನ್ನೂ ನಿಂತಿಲ್ಲ. ಒಟ್ಟು 736 ತಾಯಂದಿರು ಮೃತಪಟ್ಟಿದ್ದಾರೆ. ಇದು ಸರ್ಕಾರದ ಪ್ರಾಯೋಜಿತ ಕೊಲೆಯಾಗಿದ್ದು, ಸರ್ಕಾರವೇ ನೇರ ಹೊಣೆಯಾಗಿದೆ ಎಂದರು.

ಐವಿ ದ್ರಾವಣವನ್ನು ರಾಜ್ಯ ಸರ್ಕಾರ ಪೂರೈಸುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ರಾಜ್ಯ ಸರ್ಕಾರ ಔಷಧಿಯನ್ನು ಪರೀಕ್ಷಿಸಬೇಕು. ಬೇರೆ ರಾಜ್ಯಗಳಲ್ಲಿ ಎಲ್ಲೂ ಈ ಸಾವುಗಳು ಕಂಡುಬಂದಿಲ್ಲ . ಕರ್ನಾಟಕದಲ್ಲಿ ಮಾತ್ರ ಈ ಘಟನೆಗಳು ನಡೆಯುತ್ತಿದೆ ಎಂದರು.

462 ಕಳಪೆ ಔಷಧವೆಂದು ಹೇಳಿರುವ ಸರ್ಕಾರವೇ ಇದೇ ಔಷಧಿಗಳನ್ನು ಆಸ್ಪತ್ರೆಗೆ ಪೂರೈಸಲಾಗಿದೆ ಎಂದು ದೂರಿದರು. ಒಂದು ವರ್ಷದಲ್ಲಿ ಬಿಜೆಪಿ ಬಹಳಷ್ಟು ‌ಹೋರಾಟಗಳನ್ನು ಮಾಡಿದೆ. ಎಲ್ಲ ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗಿದೆ. ಬಾಣಂತಿಯರ ಸಾವಿನ ವಿರುದ್ಧದ ಹೋರಾಟವನ್ನು ನಿಲ್ಲಿಸಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ