ತಾಲೂಕು ಹಾಗೂ ರಾಜ್ಯ ಮಟ್ಟದ ಶಿಕ್ಷಣ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯೂ ರಾಜ್ಯದಲ್ಲಿ ಒಂದು ಪದವಿ ಪೂರ್ವ ಕಾಲೇಜು ಹಾಗೂ ಶಾಲೆಯನ್ನು ದತ್ತು ಪಡೆಯಲು ಸೂಚಿಸಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಆದೇಶಿಸಿದ್ದಾರೆ. ಇದು ಕೇವಲ ಶಿಕ್ಷಣ ಇಲಾಖೆ ಮಾತ್ರವಲ್ಲದೇ ತಾಲೂಕು ಮತ್ತು ರಾಜ್ಯ ಮಟ್ಟದ ಅಧಿಕಾರಿಗಳಿಗೂ ಅನ್ವಯವಾಗಲಿದೆ. ದತ್ತು ಸ್ವೀಕರಿಸುವ ಸಂಸ್ಥೆಯ ಶೈಕ್ಷಣಿಕ ಅಭಿವೃದ್ಧಿ ಹಾಗೂ ಶಿಕ್ಷಣ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಆದೇಶದಲ್ಲಿ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ 47,000 ಸರ್ಕಾರಿ ಶಾಲೆಗಳು ಹಾಗೂ 1,200 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ, ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಇತರ ಉನ್ನತ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳನ್ನು ದತ್ತು ಪಡೆಯುವುದಕ್ಕೆ ಹಂಚಿಕೆ ಮಾಡಲಿದ್ದಾರೆ. ದತ್ತು ಪಡೆಯಲು ಹಂಚಿಕೆ ಮಾಡಲಿರುವ ಶಾಲೆಗಳ ಪೈಕಿ ಬಹುತೇಕ ಶಾಲೆಗಳು ಗ್ರಾಮೀಣ ಶಾಲೆಗಳಾಗಿರಲಿದ್ದು, ಜಿಲ್ಲಾ ಮಟ್ಟದಲ್ಲಿ ಶಿಕ್ಷಣ ಇಲಾಖೆ, ಪದವಿ ಪೂರ್ವ ಇಲಾಖೆಯ ಉಪ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳು ನೋಡಲ್ ಅಧಿಕಾರಿಗಳಾಗಿರಲಿದ್ದು ಮಾಸಿಕ ವರದಿ ಸಲ್ಲಿಸಲಿದ್ದಾರೆ.