ಶಿಕ್ಷಕರೇ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯಾ? ನೋಂದಣಿಗೆ ನವೆಂಬರ್ 6 ಡೆಡ್ ಲೈನ್
ಬುಧವಾರ, 2 ಅಕ್ಟೋಬರ್ 2019 (18:04 IST)
ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಹಾಲಿ ಸದಸ್ಯರ ಅವಧಿಯು 2020ರ ಜೂನ್ 30ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮತದಾರರ ನೋಂದಣಿ ಕಾರ್ಯ ನಡೆಯುತ್ತಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿ ಪರಿಷ್ಕರಣೆಗೆ ಅಕ್ಟೋಬರ್ 1 ರಂದು ಕ್ಷೇತ್ರದ ಮತದಾರರ ನೊಂದಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅಧಿಸೂಚನೆ ಹೊರಡಿಸಿದ್ದಾರೆ.
01-11-2019 ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಅರ್ಹ ಮತದಾರರು ನವೆಂಬರ್ 6ರೊಳಗೆ ನಮೂನೆ 19ರ ಜೊತೆಗೆ ಅನುಬಂಧ ‘ಬಿ’ ಲಗತ್ತಿಸಿ ಕ್ಷೇತ್ರದ ನೊಂದಣಾಧಿಕಾರಿಗಳಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಮತ್ತು ಸಹಾಯಕ ನೊಂದಣಾಧಿಕಾರಿಗಳಾಗಿರುವ ಕಲಬುರಗಿ, ಬೀದರ, ಯಾದಗಿರಿ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ, ಕಲಬುರಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರು, ಕಂದಾಯ ಉಪ ವಿಭಾಗದ ಸಹಾಯಕ ಆಯುಕ್ತರು, ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪ್ರತಿ ಬಾರಿ ಹೊಸದಾಗಿ ಮತದಾರರ ಪಟ್ಟಿ ತಯ್ಯಾರಿಸಲಾಗುವುದರಿಂದ ಈ ಹಿಂದೆ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಸಹ ಈಗ ಮತ್ತೊಮ್ಮೆ ಮತಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.