ಜೆಡಿಎಸ್ ಶಾಸಕಾಂಗ ಸಭೆ: ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ಬಾಲಕೃಷ್ಣ

ಗುರುವಾರ, 9 ಜೂನ್ 2016 (20:22 IST)
ಯಾವ ಮಾನದಂಡದಡಿ ರಾಜ್ಯಸಭೆ ಮತ್ತು ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೀರಿ ಎಂದು ಮಾಗಡಿ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
 
ವಿಧಾನಸೌಧದಲ್ಲಿ ನಡೆದಿರುವ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಮಾಗಡಿ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಮಧ್ಯ ವಾಗ್ವಾದ ಶುರುವಾಗಿದೆ. 
 
ಪಕ್ಷದ ಯಾವ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ನೀವು ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿದ್ದೀರಿ. ಯಾವ ಮಾನದಂಡದಡಿ ಅವರನ್ನು ಆಯ್ಕೆಮಾಡಿದ್ದೀರಿ ಎಂದು ಎಲ್ಲಾ ಶಾಸಕರ ಎದುರಲ್ಲೇ ಏರು ಧ್ವನಿಯಲ್ಲಿ ಮಾಗಡಿ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
 
ವಾಗ್ವಾದ ವಿಕೋಪಕ್ಕೆ ತೆರಳುತ್ತಿದ್ದಂತೆ ಜೆಡಿಎಸ್ ಮುಖಂಡ ವೈ.ಎಸ್.ದತ್ತಾ ಹತ್ತಿರದಲ್ಲಿದ್ದ ಮಾಧ್ಯಮದವರನ್ನು ಹೊರಗೆ ಕಳುಹಿಸಿದರು ಎನ್ನಲಾಗಿದೆ.
 
ಶಾಸಕರ ಪ್ರಶ್ನೆಗೆ ಉತ್ತರ ನೀಡಿರುವ ಎಚ್.ಡಿ.ಕುಮಾರಸ್ವಾಮಿ, ಪಕ್ಷದಲ್ಲಿ ಯಾರು ಯಾರು ಏನು ಮಾಡುತ್ತಿದ್ದಾರೆ ಎಂದು ಮಾಹಿತಿ ಇದೆ ಎಂದು ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ