ಅನ್ನರಾಮಯ್ಯ ಎಂದು ಕೊಚ್ಚಿಕೊಳ್ಳುವವರು ಬಾಕಿ ದುಡ್ಡು ಕೊಟ್ಟಿಲ್ಲ ಯಾಕೆ: ಬಿವೈ ವಿಜಯೇಂದ್ರ

Krishnaveni K

ಮಂಗಳವಾರ, 8 ಜುಲೈ 2025 (12:49 IST)
ಬೆಂಗಳೂರು: ತಾನು ಅನ್ನರಾಮಯ್ಯ ಎಂದು ಕೊಚ್ಚಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ತಲುಪಿಸುವ ಲಾರಿ ಮಾಲಿಕರಿಗೆ ಬಾಕಿ ಹಣ ಕೊಟ್ಟಿಲ್ಲ ಯಾಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ಟೀಕಿಸಿರುವ ಅವರು, ‘ಸರ್ಕಾರದ ಖಜಾನೆ ಬರಿದಾಗಿಲ್ಲ ಎಂಬ ಸ್ಪಷ್ಟನೆಯ ನಿಮ್ಮ ಹೇಳಿಕೆಗಳು ಸುಳ್ಳು ಹಾಗೂ ಭಂಡತನದ ಪರಮಾವಧಿ ಎನ್ನುವುದನ್ನು ಅನ್ನಭಾಗ್ಯ ಯೋಜನೆಯ ಸಾರಥಿಗಳಾಗಿ ಕೆಲಸ ಮಾಡುತ್ತಿದ್ದ ಲಾರಿ ಮಾಲೀಕರಿಗೆ ತಿಂಗಳುಗಟ್ಟಲೆ ಬಾಡಿಗೆ ಪಾವತಿಸದೇ (4500  ಲಾರಿಗಳು)ಅವರ ಬದುಕಿನ ಭಾಗ್ಯಕ್ಕೆ ಬರೆ ಎಳೆದಿದ್ದೀರಿ. ಇದರ ಪರಿಣಾಮ ಇಂದಿನಿಂದ ಅನ್ನ ಭಾಗ್ಯವನ್ನು ಅವಲಂಬಿಸಿದ್ದ ಲಕ್ಷಾಂತರ ಬಡ ಕುಟುಂಬಗಳಿಗೆ ‘ಖಾಲಿ ತಟ್ಟೆಯಲ್ಲಿ ಕೈ ತೊಳೆಯುವ ಭಾಗ್ಯ ‘ಕರುಣಿಸುತ್ತಿದ್ದೀರಿ.

ನಿಮ್ಮ  ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯದ ಆಹಾರ ಧಾನ್ಯಗಳನ್ನು ಸಾಗಿಸುವ ಲಾರಿಗಳಿಗೆ ಬಾಡಿಗೆ ಕೊಡುವ ಸ್ಥಿತಿಯಲ್ಲೂ ಇಲ್ಲದ ಕೆಟ್ಟ ಪರಿಸ್ಥಿತಿಗೆ ತಲುಪಿದೆ ಎಂದರೆ ಸರ್ಕಾರದ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗಿರುವುದರ ಸೂಚನೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತಿದೆ’ ಎಂದಿದ್ದಾರೆ.

‘ಅನ್ನಭಾಗ್ಯದ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವೊಂದೇ ಸಾಗಣೆ ವೆಚ್ಚ ಭರಿಸಬೇಕಿಲ್ಲ, ಪ್ರಧಾನಿ ಮಾನ್ಯ ಮೋದಿ ಜೀ ಅವರ ನೇತೃತ್ವದ ಕೇಂದ್ರ ಸರ್ಕಾರ ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ನೀಡುತ್ತಿರುವ ಉಚಿತ 5 ಕೆ.ಜಿ ಅಕ್ಕಿಯ ಜೊತೆಗೆ ಆಹಾರ ಧಾನ್ಯ ಸಾಗಣೆಯ ವೆಚ್ಚವನ್ನೂ ಭರಿಸುತ್ತಿದೆ ಆದರೂ ಲಾರಿ ಮಾಲೀಕರಿಗೆ ಬಾಡಿಗೆ ಕೊಡದೆ ಏಕಿಷ್ಟು ಸತಾಯಿಸುತ್ತಿದ್ದೀರಿ.

ನಿಮ್ಮ ಸರ್ಕಾರದ ಭ್ರಷ್ಟ ವ್ಯವಹಾರಗಳಿಗೆ ಆದಾಯ ಮೂಲಗಳನ್ನು ಕಂಡುಹಿಡಿದುಕೊಳ್ಳಲು ಬೆಲೆ ಏರಿಕೆ, ಅವೈಜ್ಞಾನಿಕ ತೆರಿಗೆಗಳನ್ನು ಜನರ ಮೇಲೆ ಹೇರುತ್ತಲೇ ಇದ್ದೀರಿ, ನಿಮ್ಮ ಕಮಿಷನ್ ದಂಧೆಗೆ ಕನಿಷ್ಠ ಅಲ್ಪವಿರಾಮನ್ನಾದರೂ ನೀಡಿ ಜನರನ್ನು ಹಸಿವೆಂಬ ಬಾಧೆ ಬಾದಿಸದಂತೆ ಈ ಕೂಡಲೇ ಲಾರಿ ಮಾಲೀಕರ ಬಾಕಿ ಹಣವನ್ನು ಪಾವತಿಸಿ ಹಸಿದವರ ಆಕ್ರೋಶ ಹಾಗೂ ಲಾರಿಯನ್ನು ನಂಬಿ ಜೀವನ ಮಾಡುತ್ತಿರುವ ಲಾರಿ ಮಾಲೀಕರು ಹಾಗೂ ಚಾಲಕರ ಕುಟುಂಬಗಳ ಶಾಪಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಿ’ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ