ಯಡಿಯೂರಪ್ಪ ಸಭೆಗೆ ಗೈರುಹಾಜರಾಗಲಿರುವ ಈಶ್ವರಪ್ಪ

ಶುಕ್ರವಾರ, 1 ಜುಲೈ 2016 (16:07 IST)
ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳನ್ನು ಹೊಗಲಾಡಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾಳೆ ಕರೆದ ಸಭೆಗೆ ಕೆ.ಎಸ್.ಈಶ್ವರಪ್ಪ  ಗೈರುಹಾಜರಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕೆ.ಎಸ್.ಈಶ್ವರಪ್ಪ  ನಾಳಿನ ಸಭೆಗೆ ಗೈರುಹಾಜರಾಗಲಿರುವುದರಿಂದ ಬಿಜೆಪಿಯಲ್ಲಿ ಮತ್ತಷ್ಟು ಭಿನ್ನಾಭಿಪ್ರಾಯ, ಗೊಂದಲಗಳಿಗೆ ಕಾರಣವಾಗಲಿದೆ ಎನ್ನುವ ಆತಂಕ ಇತರ ಮುಖಂಡರನ್ನು ಕಾಡುತ್ತಿದೆ ಎನ್ನಲಾಗಿದೆ.
 
ಪದಾಧಿಕಾರಿಗಳ ನೇಮಕ ಕುರಿತಂತೆ ಕೋರ್ ಕಮಿಟಿಗೆ ಮಾಹಿತಿ ನೀಡಬೇಕು.ಆದರೆ, ಕೋರ್ ಕಮಿಟಿ ಗಮನಕ್ಕೆ ತಾರದೇ ನೇಮಕಾತಿ ಮಾಡಿರುವುದು ಸರಿಯಲ್ಲ. ನಮ್ಮ ಪಕ್ಷ ಶಿಸ್ತು ಮತ್ತು ಸಂಘಟನೆಗೆ ಹೆಸರುವಾಸಿಯಾದ ಪಕ್ಷ. ಶಿಸ್ತು ಮತ್ತು ಸಂಘಟನಾತ್ಮಕ ಪಕ್ಷ ಕಟ್ಟಬೇಕು ಎನ್ನುವುದೇ ನಮ್ಮ ಸಿದ್ದಾಂತವಾಗಿದೆ ಎಂದು ತಿಳಿಸಿದ್ದಾರೆ.
 
ನಮಗೆ ಯಾರ ಮೇಲೆ ದ್ವೇಷವೂ ಇಲ್ಲ ಪ್ರೀತಿಯೂ ಇಲ್ಲ. ಏಕಪಕ್ಷೀಯವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಿರುವುದಕ್ಕೆ ನಮ್ಮ ಸ್ಪಷ್ಟ ವಿರೋಧವಿದೆ ಎಂದು ಹೇಳಿದ್ದಾರೆ.
 
ಇಂದು ರಾಜ್ಯಾಧ್ಯಕ್ಷರು ಕೋರ್ ಕಮಿಟಿಯ ಅಪ್ಪಣೆಯಿಲ್ಲದೇ ತಮಗೆ ಆಪ್ತರಾದ ಕಾರ್ಯಕರ್ತರನ್ನು ಪದಾಧಿಕಾರಿಗಳಾಗಿ ನೇಮಕ ಮಾಡುತ್ತಾರೆ. ನಾಳೆ ಜಿಲ್ಲಾ ಅಧ್ಯಕ್ಷರು ರಾಜ್ಯ ಘಟಕದ ಮಾಹಿತಿಯಿಲ್ಲದೇ ಪದಾಧಿಕಾರಿಗಳ ನೇಮಕ ಮಾಡುತ್ತಾರೆ. ಹೀಗೆ ಮುಂದುವರಿದಲ್ಲಿ ಬಿಜೆಪಿ ಪಕ್ಷ ಅಧೋಗತಿಗೆ ಇಳಿಯುತ್ತದೆ ಎಂದು ಈಶ್ವರಪ್ಪ ಗುಡುಗಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ