ಕಲಬುರಗಿ: ಜಿಲ್ಲೆಯಲ್ಲಿ ಬಿಸಿಲಿನ ರುದ್ರನರ್ತನದ ಆರ್ಭಟ ಜೋರಾಗಿದೆ. ಜಿಲ್ಲೆಯ ಕಾಳಗಿಯಲ್ಲಿ ಬುಧವಾರ ಅತ್ಯಧಿಕ 44.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.
ಮಾದನ ಹಿಪ್ಪರಗಿಯಲ್ಲಿ ಗುರುವಾರ 44.1 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಈ ಬಾರಿ ಬೇಸಿಗೆ ಆರಂಭದಿಂದಲೇ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಬೆಂಕಿಯುಂಡೆ ಆಗುತ್ತಿವೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮುಗಿಲಿನಿಂದ ಕೆಂಡ ಬೀಳುವ ಅನುಭವವಾಗುತ್ತಿದ್ದು, ಅದಕ್ಕೆ ತಕ್ಕಂತೆ ಏಪ್ರಿಲ್ ಮೊದಲ ವಾರದಲ್ಲಿ ಬಿಸಿಲು 44.4 ಡಿಗ್ರಿ ಸೆಲ್ಸಿಯಸ್ ದಾಟುವ ಮೂಲಕ ಹೊಸ ದಾಖಲೆ ಬರೆದಿದೆ.
ರಾಜಧಾನಿಯಲ್ಲೂ ದಾಖಲೆ ಉಷ್ಣಾಂಶ: ಬೆಂಗಳೂರಿನಲ್ಲಿ ಮಂಗಳವಾರ ಗರಿಷ್ಠ ಉಷ್ಣಾಂಶ 37.2 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದೊಂದು ವಾರದಿಂದ ನಗರದಲ್ಲಿ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದೆ. ಭಾನುವಾರ 36.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
ನಗರದಲ್ಲಿ ಏಪ್ರಿಲ್‌ನ ವಾಡಿಕೆ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಆಗಿದ್ದು, ವಾಡಿಕೆ ಪ್ರಮಾಣಕ್ಕಿಂತ 3.2 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶ ಮಂಗಳವಾರ ದಾಖಲಾಗಿದೆ. ಈ ಮೂಲಕ ಮೂರು ವರ್ಷದ ಹಿಂದಿನ ಏಪ್ರಿಲ್ ತಿಂಗಳಿನ ಗರಿಷ್ಠ ಉಷ್ಣಾಂಶ ದಾಖಲೆಯನ್ನು ಸರಿಗಟ್ಟಿದೆ.