ಬೆಂಗಳೂರು -ರಾಜ್ಯಸಭಾ ಚುನಾವಣೆಯಲ್ಲಿ ವಿಜೇತರಾದ ನಾಸಿರ್ ಹುಸೇನ್ ಅವರ ವಿಜಯೋತ್ಸವದ ವೇಳೆ ಅವರ ಅಭಿಮಾನಿಯೊಬ್ಬ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾನೆಂದು ಬಿಜೆಪಿ ಆರೋಪಿಸಿದ್ದು, ಆರೋಪಿಯ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಪಾಕ್ ಪರ ಘೋಷಣೆ ಕೂಗಿದ ಆರೋಪಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಸದಸ್ಯರು ನಡೆಸಿದ ಪ್ರತಿಭಟನೆಯಿಂದಾಗಿ ಬುಧವಾರ ಸಂಪೂರ್ಣ ಕಲಾಪ ಬಲಿಯಾಯ್ತು. ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದ ಕಾರಣ ಸದನವನ್ನು ಗುರುವಾರ ಬೆಳಗ್ಗೆಗೆ ಮುಂದೂಡಿ ಸಭಾಪತಿ ಯು.ಟಿ ಖಾದರ್ ಆದೇಶ ಹೊರಡಿಸಿದರು.
ಗೃಹಸಚಿವ ಜಿ.ಪರಮೇಶ್ವರ್ ಮಾತನಾಡಿ, ತನಿಖೆ ಈಗಾಗಲೇ ಪ್ರಾರಂಭಗೊಂಡಿದೆ. ಪಾಕ್ ಪರ ಘೋಷಣೆ ಕೂಗಿದ್ದಾರೆನ್ನಲಾದ ವಿಡಿಯೋ ಕ್ಲಿಪ್ ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬಂದ ನಂತರ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಆ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.