ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅದ್ಯಕ್ಷರ ಹುದ್ದೆಗೆ ಇಂದಿದ್ದ ಹೆಸರು ನಾಳೆಗೆ ಮತ್ತೆ ಬದಲಾಗುತ್ತಿದೆ. ಚುನಾವಣೆ ವೇಳೆ ಶಾಸಕರ ಆಯ್ಕೆ ವಿಚಾರದಲ್ಲಿ ಹೊಸ ಪ್ರಯೋಗ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದಲ್ಲೂ ಅಚ್ಚರಿಯ ಮೂಡಿಸುತ್ತಾ ಅನ್ನೋ ಪ್ರಶ್ನೆಯೀಗ ಎಲ್ಲರನ್ನ ಕಾಡತೊಡಗಿದೆ. ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ಅಯ್ಕೆ ವಿಚಾರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹೊಸ ಅಧ್ಯಕ್ಷರ ನೇಮಕ ವಿಚಾರದಲ್ಲಿ ಪಕ್ಷ ಯಾವುದೇ ಮಾಹಿತಿ ಹೊರ ಬಿಡದಿದ್ದರೂ, ಪಕ್ಷದ ಪಡಸಾಲೆಯಲ್ಲಿ ಹಲ ಬಗೆಯ ಮಾತುಗಳು ಕೇಳಿ ಬರುತ್ತಿವೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಾಜಿ ಸಚಿವ ಸಿ ಟಿ ರವಿ ಅವರನ್ನು ಕೆಳಗಿಳಿಸಿದ ತಕ್ಷಣವೇ ಅವರೇ ಬಿಜೆಪಿ ಮುಂದಿನ ರಾಜ್ಯಾಧ್ಯಕ್ಷರೆನ್ನುವ ಮಾತು ಪಕ್ಷದೊಳಗೆ ಕೇಳಿ ಬಂದಿತ್ತು. ಇತ್ತ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿ ಟಿ ರವಿ. ನಾನು ಹುದ್ದೆ ಆಕಾಂಕ್ಷಿಯಲ್ಲ ಆದರೆ ಪಕ್ಷ ಕೊಡುವ ಯಾವುದೇ ಜವಾಬ್ದಾರಿ ಆದ್ರೂ ಅದನ್ನು ನಿಭಾಯಿಸುವೆ ಎಂದು ಹೇಳಿದ್ರು. ಈ ಹಿನ್ನೆಲೆಯಲ್ಲಿ ಅವರ ದೆಹಲಿ ಭೇಟಿ ಕುತೂಹಲ ಮೂಡಿಸಿತ್ತು.
ಈ ಬೆಳವಣಿಗೆ ನಡುವೆಯೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಹೆಸರು ಕೇಳಿ ಬಂದಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಚುನಾವಣೆ ವೇಳೆ ಎರಡನೇ ಸ್ತರದ ನಾಯಕತ್ವ ಬೆಳೆಸಲು ಹೊಸ ಪ್ರಯೋಗಳಿಗೆ ಕೈ ಹಾಕಿದ್ದ ಬಿಜೆಪಿ, ಈಗ ರಾಜ್ಯಾಧ್ಯಕ್ಷರ ಹುದ್ದೆ ನೇಮಕದಲ್ಲೂ ಹೊಸತನಕ್ಕೆ ಮುನ್ನುಡಿ ಬರೆಯಲಿದೆಯೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ಬಿಜೆಪಿ ಮೂಲಗಳ ಪ್ರಕಾರ ಇಂತಹದ್ದೊಂದು ಸಾಧ್ಯತೆ ಇದ್ದು, ಈ ಬಾರಿ ಪಕ್ಷ ದಲಿತ ಸಮುದಾಯಕ್ಕೆ ಮನ್ನಣೆ ನೀಡಿ ಹೊಸ ಇತಿಹಾಸ ಬರೆಯಲು ಮುಂದಾಗುತ್ತಿದೆ ಎನ್ನಲಾಗುತ್ತಿದೆ.