ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಯುವತಿಯರ ಮೇಲಿನ ಹತ್ಯೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಘಟನೆಗಳ ಬಗ್ಗೆ ಬಿಜೆಪಿ ನಿಯೋಗ ಇಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ನೀಡಿದೆ.
ರಾಜ್ಯದಲ್ಲಿ ಇತ್ತೀಚೆಗೆ ಕೊಲೆ ಪ್ರಕರಣಗಳು ಹೆಚ್ಚಾಗಿರುವುದು ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗ ಪೊಲೀಸ್ ಮಹಾನಿರ್ದೇಶಕರಿಗೆ ಒತ್ತಾಯಿಸಿದೆ. ಬಿಜೆಪಿ ನಾಯಕ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ನೇತೃತ್ವದಲ್ಲಿ ಇಂದು ಬಿಜೆಪಿ ನಿಯೋಗ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದೆ.
ಹುಬ್ಬಳ್ಳಿಯಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಎರಡು ಭೀಕರ ಕೊಲೆ ನಡೆದಿತ್ತು. ಕೊಡಗಿನಲ್ಲಿ ಇತ್ತೀಚೆಗೆ ಯುವತಿಯೊಬ್ಬಳ ಶಿರಚ್ಛೇದನ ಮಾಡಲಾಗಿತ್ತು. ಇಂತಹ ಹಲವು ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿತ್ತು. ಆದರೆ ಇತ್ತೀಚೆಗೆ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ. ಇದರಿಂದಾಗಿ ಅಪರಾಧಿಗಳ ರಾಜ್ಯ ಎಂಬ ಕೆಟ್ಟ ಹಣೆಪಟ್ಟಿ ಹೊರುವಂತಾಗಿದೆ. ರಾಜ್ಯ ಸರ್ಕಾರವು ಕಾನೂನು ಸುವ್ಯವಸ್ಥೆ ಪಾಲನೆಗೆ ಗಮನ ಕೊಡುತ್ತಿಲ್ಲ. ಅಪರಾಧ ಪ್ರಮಾಣ ಹೆಚ್ಚಾಗಲು ಇದುವೇ ಕಾರಣವಾಗುತ್ತಿದೆ. ಅಲ್ಲದೆ ರಾಜ್ಯ ಪೊಲೀಸರು ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಾಗ ದೂರು ದಾಖಲಿಸುತ್ತಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ಧ್ವೇಷ ಕಾರಲಾಗುತ್ತಿದೆ. ಇದರಿಂದಾಗಿ ರಾಜ್ಯ ಪೊಲೀಸ್ ಇದೆಯೋ ಇಲ್ಲವೋ ಎಂಬ ಅನುಮಾನ ಬರುವಂತಾಗಿದೆ ಎಂದು ದೂರಿನಲ್ಲಿ ಬಿಜೆಪಿ ಅಸಮಾಧಾನ ಹೊರಹಾಕಿದೆ.