ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಬೆಂಗಳೂರಿನ ಸಮಸ್ಯೆ ಬಿಚ್ಚಿಟ್ಟ ಬಿಜೆಪಿ ನಾಯಕರು

Krishnaveni K

ಮಂಗಳವಾರ, 28 ಮೇ 2024 (13:53 IST)
ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆ ಅತ್ಯಂತ ಹದಗೆಟ್ಟಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಟೀಕಿಸಿದರು.

ಬಿಜೆಪಿ ಬೆಂಗಳೂರು ಮಹಾನಗರದ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನವನದ ಬಳಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೀದಿ ರಂಪಾಟಗಳು ಗೂಂಡಾ ಪ್ರವೃತ್ತಿ ಹೆಚ್ಚಾಗಿದ್ದು, ಮನೆಯಿಂದ ಹೊರಟ ಮಹಿಳೆಯರು, ಯುವಜನರು ಮನೆ ಸೇರುವ ಧೈರ್ಯ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹೊಂಡಗುಂಡಿಯಲ್ಲಿ ಬಿದ್ದು ಸಾಯುವ ಭಯದಿಂದ ಹಿರಿಯರು ನೆಮ್ಮದಿಯಿಂದ ಓಡಾಡಲು ಸಾಧ್ಯವಿಲ್ಲವಾಗಿದೆ ಎಂದು ಆತಂಕದಿಂದ ನುಡಿದರು.

ನಿನ್ನೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರಿಂದ ರಾಜ್ಯದ ಎಲ್ಲ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿರುವುದು ಗೊತ್ತಿದೆ. ಅಧಿಕಾರಿಗಳ ಪರವಾಗಿ ಬಿಜೆಪಿ ಇದೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳದಿರಿ ಎಂದು ಮನವಿ ಮಾಡಿದರು.

ತಕ್ಷಣ ಗುಂಡಿ ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ, ಭ್ರಷ್ಟಾಚಾರ ಹೀಗೇ ಮುಂದುವರೆದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಸರಕಾರ ಸರಿದಾರಿಗೆ ಬರದೆ ಇದ್ದರೆ ಅದನ್ನು ಸರಿದಾರಿಗೆ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಲಿದ್ದಾರೆ ಎಂದು ತಿಳಿಸಿದರು.
 
 
ಬೆಂಗಳೂರಿನ ಕಡೆಗಣನೆ: ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬ್ರ್ಯಾಂಡ್ ಬೆಂಗಳೂರು ಮೂಲಕ ಸಿಂಗಾಪುರ, ಅಮೆರಿಕದ ನ್ಯೂಯಾರ್ಕ್ ಥರ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಒಂದು ವರ್ಷವಾದರೂ ಒಂದು ರೂಪಾಯಿ ಹಣವನ್ನು ಬೆಂಗಳೂರಿಗೆ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದರು.

ರಾಜ್ಯದ ಶೇ 60ರಿಂದ 65 ತೆರಿಗೆ ಬೆಂಗಳೂರಿಂದ ಸಂಗ್ರಹವಾಗುತ್ತಿದೆ. ಸಿದ್ದರಾಮಯ್ಯನವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದರು. ಈಗ ಬೆಂಗಳೂರಿನ ಜನತೆ ಬೆಂಗಳೂರಿನ ತೆರಿಗೆ ಬೆಂಗಳೂರಿಗರ ಹಕ್ಕು ಎಂದು ಹೋರಾಟ ಮಾಡಲು ಸಿದ್ಧರಾಗುವಂತಾಗಿದೆ ಎಂದು ತಿಳಿಸಿದರು.
ಮಳೆಯ ಟ್ರೈಲರ್ ಇದು. ಮಳೆಗಾಲ ಆರಂಭವಾಗುವಾಗಲೇ ರಸ್ತೆಗಳು ಹೊಂಡ ಗುಂಡಿಯಿಂದ ಕೂಡಿದೆ. ಎಲ್ಲೆಡೆ ಕಸದ ರಾಶಿ ಬಿದ್ದಿದೆ. ಕಸ ಎತ್ತುವವರಿಗೆ ಜನವರಿಯಿಂದ ಸಂಬಳ ಕೊಟ್ಟಿಲ್ಲ. ಮುಖ್ಯಮಂತ್ರಿಯವರು ಮೊನ್ನೆ ಒಣಗಿದ ಮರ ತೆಗೆಸಲು ಸೂಚಿಸಿದ್ದರು. ಸಿಎಂ ಹೇಳಿದ್ದಾರೆಂದು ಒಂದಾದರೂ ಮರ ತೆಗೆದಿದ್ದರೆ ಸಾಕ್ಷಿ ತೋರಿಸಿ ಎಂದು ಸವಾಲೆಸೆದರು.
 
ಇದು ಎಚ್ಚರಿಕೆ ಗಂಟೆ- ಡಾ.ಸಿ.ಎನ್.ಅಶ್ವತ್ಥನಾರಾಯಣ್
ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮಾತನಾಡಿ, ಬೆಂಗಳೂರಿನ ಜನತೆಗೆ ತೊಂದರೆ ಕೊಟ್ಟರೆ ನಾವು ಸುಮ್ಮನಿರುವುದಿಲ್ಲ. ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಈ ಪ್ರತಿಭಟನೆ ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ಗಂಟೆ ಎಂದು ಅವರು ತಿಳಿಸಿದರು. ಆಶಾದಾಯಕ, ಭರವಸೆದಾಯಕ ನಗರ ಬೆಂಗಳೂರನ್ನು ಕಾಂಗ್ರೆಸ್ ಸರಕಾರ ಕಡೆಗಣಿಸಿದ್ದು, ಈ ಸರಕಾರಕ್ಕೆ ಪ್ರಜ್ಞೆ ಇದೆಯೇ ಎಂದು ಟೀಕಿಸಿದರು. ಇದು ಅತ್ಯಂತ ಕೆಟ್ಟ- ಭ್ರಷ್ಟ ಸರಕಾರ. ಗುತ್ತಿಗೆದಾರರ ರಕ್ತ ಹೀರುವ ಸರಕಾರ ಎಂದು ಅವರು ದೂರಿದರು.

ಮಾಜಿ ಸಚಿವರಾದ ಬೈರತಿ ಬಸವರಾಜ್, ಗೋಪಾಲಯ್ಯ, ಮುನಿರತ್ನ, ನಾರಾಯಣ ಗೌಡ, ಶಾಸಕರಾದ ವಿಶ್ವನಾಥ್, ಮುನಿರಾಜು, ರವಿಸುಬ್ರಹ್ಮಣ್ಯ, ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರಿನ ಮಾಜಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
 
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ