ಬೆಂಗಳೂರು: ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಸರ್ಕಾರೀ ಬಸ್ ಗಳ ಟಿಕೆಟ್ ದರ ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲೇ ಈಗ ಬಸ್ ಪಾಸ್ ದರವನ್ನೂ ಹೆಚ್ಚಳ ಮಾಡಿ ಶಾಕ್ ಕೊಟ್ಟಿದೆ. ಪರಿಷ್ಕೃತ ದರದ ವಿವರ ಇಲ್ಲಿದೆ.
ಟಿಕೆಟ್ ದರದ ಬಳಿಕ ಬಿಎಂಟಿಸಿ ಪಾಸ್ ದರವನ್ನೂ ಹೆಚ್ಚಳ ಮಾಡಿ ಸಾರಿಗೆ ಸಂಸ್ಥೆ ಅಧಿಕೃತ ಆದೇಶ ಹೊರಡಿಸಿದೆ. ಈ ದರ ಹೆಚ್ಚಳ ಇಂದಿನಿಂದಲೇ ಜಾರಿಗೆ ಬರಲಿದೆ. ಬಿಎಂಟಿಸಿಯ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್ ದರವನ್ನು ಹೆಚ್ಚಳ ಮಾಡಲಾಗಿದೆ. ಸಂಸ್ಥೆಯ ಆರ್ಥಿಕ ಲಾಭದ ದೃಷ್ಟಿಯಿಂದ ದರ ಹೆಚ್ಚಳ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಲಾಗಿದೆ.
ಹೊಸ ಪಾಸ್ ದರ ವಿವರ ಇಲ್ಲಿದೆ
ಸಾಮಾನ್ಯ ದಿನದ ಪಾಸ್ ಇದುವರೆಗೆ 70 ರೂ.ಗಳಿತ್ತು. ಇದೀಗ ಅದನ್ನು 10 ರೂ. ಏರಿಕೆ ಮಾಡಲಾಗಿದ್ದು, 80 ರೂ. ಆಗಲಿದೆ.
ಸಾಪ್ತಾಹಿಕ ಪಾಸ್ ದರ 300 ರೂ.ಗಳಷ್ಟಿತ್ತು. ಇದೀಗ 50 ರೂ. ಹೆಚ್ಚಳ ಮಾಡಲಾಗಿದ್ದು 350 ರೂ. ಗೆ ತಲುಪಿದೆ.
ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ ಪಾಸ್ 945 ರೂ. 1080 ರೂ.ಗೆ ಹೆಚ್ಚಳ ಮಾಡಲಾಗಿದೆ.
ಸಾಮಾನ್ಯ ಮಾಸಿಕ ಪಾಸ್ ದರ 1080 ರೂ.ನಿಂದ 1200 ರೂ.ಗೆ ಏರಿಕೆಯಾಗಿದೆ.
ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸ್ ಟೋಲ್ ಶುಲ್ಕ ಒಳಗೊಂಡಂತೆ 2200 ರೂ.ನಿಂದ 2350 ರೂ.ಗೆ ಏರಿಕೆಯಾಗಿದೆ.
ವಜ್ರ ಬಸ್ ನ ದೈನಿಕ ಪಾಸ್ ದರ 120 ರೂ. ಗಳಿಂದ 140 ರೂ.ಗೆ ಏರಿಕೆಯಾಗಿದೆ
ವಾಯುವಜ್ರ ಬಸ್ಸಿನ ದರ 3755 ರೂ. ನಿಂದ 4000 ರೂ.ಗೆ ಏರಿಕೆಯಾಗಿದೆ
ವಿದ್ಯಾರ್ಥಿ ವಜ್ರ ಮಾಸಿಕ ಪಾಸು 1200 ರೂ. ನಿಂದ 1400 ರೂ.ಗೆ ಏರಿಕೆಯಾಗಿದೆ.