ರಾಮೇಶ್ವರಂ ಕೆಫೆ ರೀತಿಯಲ್ಲೇ ಮತ್ತೊಂದು ಬಾಂಬ್ ಬೆದರಿಕೆ

Krishnaveni K

ಮಂಗಳವಾರ, 5 ಮಾರ್ಚ್ 2024 (14:29 IST)
ಬೆಂಗಳೂರು: ರಾಮೇಶ್ವರಂ ಕೆಫೆ ರೀತಿಯಲ್ಲೇ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಮತ್ತೊಂದು ಬೆದರಿಕೆ ಕರೆ ಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹಸಚಿವ ಜಿ ಪರಮೇಶ್ವರ್ ಗೆ ಈಮೇಲ್ ಮುಖಾಂತರ ಬೆದರಿಕೆ ಪತ್ರ ಬಂದಿದೆ. 2.5 ಮಿಲಿಯನ್ ಡಾಲರ್ ಕೊಡದೇ ಇದ್ದರೆ ಬೆಂಗಳೂರಿನ ಬಸ್, ರೈಲು ನಿಲ್ದಾಣ ಸೇರಿ ಪ್ರಮುಖ ಸ್ಥಳಗಳಲ್ಲಿ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಈ ಬಗ್ಗೆ ಇದೀಗ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಬಂದ ಈಮೇಲ್ ಕುರಿತಾಗಿಯೂ ತನಿಖೆ ನಡೆಸಲಾಗುತ್ತಿದೆ. ಮೊನ್ನೆಯಷ್ಟೇ ಬೆಂಗಳೂರಿನ ರಾಮೇಶ‍್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ನಡೆದಿತ್ತು.  ಈ ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದರು. ಈ ಘಟನೆ ಬೆಂಗಳೂರಿನ ಜನರಲ್ಲಿ ಭೀತಿಯುಂಟು ಮಾಡಿದೆ.

ಈ ಘಟನೆಯ ತನಿಖೆ ಇನ್ನೂ ಜಾರಿಯಲ್ಲಿದೆ. ಇನ್ನೂ ಆರೋಪಿಯನ್ನು ಬಂಧಿಸಲಾಗಿಲ್ಲ. ಅದರ ಬೆನ್ನಲ್ಲೇ ಈಗ ಮತ್ತೊಂದು ಬೆದರಿಕೆ ಕರೆ ಬಂದಿರುವುದು ಆತಂಕವುಂಟು ಮಾಡಿದೆ.  ಕೆಲವು ಸಮಯದ ಮೊದಲು ಬೆಂಗಳೂರಿನ ಕೆಲವು ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಈಮೇಲ್ ಮೂಲಕ ಬೆದರಿಕೆ ಬಂದಿತ್ತು. ಇದೀಗ ಅದೇ ರೀತಿಯಲ್ಲಿ ಈಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ