ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣ ಕೈಗೆತ್ತಿಕೊಂಡ ಎನ್ ಐಎ

Krishnaveni K

ಸೋಮವಾರ, 4 ಮಾರ್ಚ್ 2024 (09:45 IST)
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣವನ್ನು ಸಿಬಿಐಗೆ ವಹಿಸಲು ಸಿಎಂ ಸಿದ್ದರಾಮಯ್ಯ ಇನ್ನೂ ಮೀನ ಮೇಷ ಎಣಿಸುತ್ತಿದ್ದ ಬೆನ್ನಲ್ಲೇ ಪ್ರಕರಣದ ಗಂಭೀರತೆ ಅರಿತು ಎನ್ ಐಎಗೆ ವಿಚಾರಣೆಗೆ ಮುಂದಾಗಿದೆ.

ರಾಮೇಶ್ವರಂ ಪ್ರಕರಣದ ವಿಚಾರಣೆ ನಡೆಸಲು ಪೊಲೀಸರು ಈಗ ಮೂರು ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ. ಆದರೆ ಇದುವರೆಗೆ ಹೇಳಿಕೊಳ್ಳುವ ಪ್ರಗತಿಯಾಗಿಲ್ಲ. ಇದು ಭಯೋತ್ಪಾದಕರ ಕೃತ್ಯವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡುತ್ತೀರಾ ಎಂದು ಮಾಧ‍್ಯಮಗಳು ಸಿಎಂಗೆ ಪ್ರಶ್ನೆ ಮಾಡಿತ್ತು. ಈ ವೇಳೆ ಅಗತ್ಯ ಬಿದ್ದರೆ ಎನ್ ಐಎಗೆ ವಹಿಸುವುದಾಗಿ ಹೇಳಿದ್ದರು.

ಇದೀಗ ಪ್ರಕರಣದ ಗಂಭೀರತೆ ಅರಿತು ಎನ್ಐಎ ಎಂಟ್ರಿ ಕೊಟ್ಟಿದೆ. ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ತನಿಖೆ ಕೈಗೆತ್ತಿಕೊಳ್ಳಲಿದೆ.  ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ತನಿಖೆ ಜಾರಿಯಲ್ಲಿದೆ. ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ಆದರೆ ಇದುವರೆಗೆ ಸಿಸಿಟಿವಿಯಲ್ಲಿ ದಾಖಲಾದ ಶಂಕಿತ ವ್ಯಕ್ತಿಯ ಜಾಡು ಸಿಕ್ಕಿಲ್ಲ. ಹೀಗಾಗಿ ಪ್ರತಿಪಕ್ಷ ಬಿಜೆಪಿ ಪ್ರಕರಣವನ್ನು ಎನ್ ಐಎಗೆ ವಹಿಸಬೇಕು ಎಂದು ಆಗ್ರಹಿಸುತ್ತಲೇ ಇತ್ತು. ಈ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕೆಸರೆರಚಾಟಗಳು ನಡೆಯುತ್ತಲೇ ಇತ್ತು.  ಇದೀಗ ಎನ್ ಐ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ