ಬೆಂಗಳೂರು: ಬಸ್, ಹಾಲು, ಕಸ ಎಲ್ಲದಕ್ಕೂ ಬೆಲೆ ಏರಿಕೆ, ಟ್ಯಾಕ್ಸ್ ಹಾಕಿದ ರಾಜ್ಯ ಸರ್ಕಾರ ಈಗ ಡೀಸೆಲ್ ಮೇಲಿನ ಸುಂಕವನ್ನೂ ಏರಿಸಿ 2 ರೂ. ಹೆಚ್ಚಳ ಮಾಡಿದೆ. ಇದರ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊನ್ನೆಯಷ್ಟೇ ಹಾಲಿನ ಬೆಲೆಯನ್ನು ಬರೋಬ್ಬರಿ 4 ರೂ. ಏರಿಕೆ ಮಾಡಿ ಜನರ ಮೇಲೆ ಬರೆ ಹಾಕಲಾಗಿತ್ತು. ಇದೀಗ ಡೀಸೆಲ್ ಬೆಲೆಯನ್ನು 2 ರೂ.ಗೆ ಏರಿಕೆ ಮಾಡಿ ಮತ್ತೆ ಗಾಯದ ಮೇಲೆ ಉಪ್ಪು ಸುರಿಯಲಾಗಿದೆ. ಇದರ ಬಗ್ಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ. 18.44 ರಿಂದ ಶೇ.21.17% ಗೆ ಏರಿಕೆ ಮಾಡಲಾಗಿದೆ. ಸದ್ಯಕ್ಕೆ ಡೀಸೆಲ್ ಬೆಲೆ 88.93 ರಷ್ಟಿತ್ತು. ಆದರೆ ಈಗ 90.93 ರೂ. ಆಗಲಿದೆ. ಡೀಸೆಲ್ ಬೆಲೆ ಏರಿಕೆ ಪರಿಣಾಮ ಸರಕು ಸಾಗಣೆ ವಾಹನಗಳು, ಕಾರ್ಮಿಕ ವರ್ಗದವರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ.
ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಕ್ಕೆ ಮತ್ತೆ ಮತ್ತೆ ಬರೆ ಬೀಳುತ್ತಿದೆ. ಇದರ ಬಗ್ಗೆ ಜನರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಾಗಿ ಇನ್ನೂ ಯಾವುದಕ್ಕೆಲ್ಲಾ ಬೆಲೆ ಏರಿಕೆ ಮಾಡುತ್ತೀರಿ? ಇನ್ನು ಎಷ್ಟೂಂತ ಸಹಿಸಬೇಕು? ಬೆಲೆ ಏರಿಕೆ ಹೊರೆ ತಗ್ಗಿಸಲು ಗ್ಯಾರಂಟಿ ತಂದೆವು ಎನ್ನುತ್ತಿರುವ ಸರ್ಕಾರ ಈಗ ಮಾಡುತ್ತಿರುವುದೇನು ಎಂದು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.