ಪಾಕ್ ಪರ ಘೋಷಣೆ ಕೂಗಿದ ಆರೋಪಿ ಶಫಿ ನಾಶಿಪುಡಿ ಧ್ವನಿ ಪರೀಕ್ಷೆ ಮಾಡಿದ ಪೊಲೀಸರು

Krishnaveni K

ಗುರುವಾರ, 29 ಫೆಬ್ರವರಿ 2024 (17:39 IST)
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಲ್ಲಿ ಬಂಧಿತನಾಗಿರುವ ಶಫಿ ನಾಶಿಪುಡಿ ಧ‍್ವನಿ ಪರೀಕ್ಷೆ ಮಾಡಲು ನಿರ್ಧರಿಸಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ ಅಭ್ಯರ್ಥಿ ನಾಸಿರ್ ಹುಸೇನ್ ಗೆದ್ದ ಬಳಿಕ ಅವರ ಬೆಂಬಲಿಗನೊಬ್ಬ ಪಾಕಿಸ್ತಾನ ಜಿಂದಾಬಾದ್ ಎಂದು ವಿಧಾನಸೌಧದಲ್ಲೇ ಘೋಷಣೆ ಕೂಗಿದ್ದ. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸದನಸಲ್ಲೂ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ಇದೇ ವಿಚಾರಕ್ಕೆ ಕಿತ್ತಾಡಿಕೊಂಡಿತ್ತು. ಪ್ರಕರಣದ ಬಗ್ಗೆ ವಿಧಾನಸೌಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.

ಇದರ ನಡುವೆ ಬ್ಯಾಡಗಿಯ ಶಫಿ ನಾಶಿಪುಡಿ ಎಂಬಾತನೇ ವಿಡಿಯೋದಲ್ಲಿ ಘೋಷಣೆ ಕೂಗಿದ ವ್ಯಕ್ತಿ ಎಂದು ಬ್ಯಾಡಗಿಯ ಬಿಜೆಪಿ ಕಾರ್ಯಕರ್ತರು ಗುರುತಿಸಿದ್ದರು. ಅದರಂತೆ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗುತ್ತಿದೆ. ಆದರೆ ಈ ಆರೋಪವನ್ನು ಆರೋಪಿ ನಿರಾಕರಿಸಿದ್ದು, ನಾನು ನಾಸಿರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದೇನೆ. ಪಾಕಿಸ್ತಾನ್ ಎಂದಿಲ್ಲ. ದೇಶದ್ರೋಹ ಘೋಷಣೆ ಕೂಗಿಲ್ಲ ಎಂದಿದ್ದಾನೆ. ಆದರೆ ಇದೀಗ ವಿಡಿಯೋದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಇದೇ ಶಫಿ ನಾಶಿಪುಡಿಯೇ ಎಂಬುದನ್ನು ಖಚಿತಪಡಿಸಲು ಪೊಲೀಸರು ಧ್ವನಿ ಪರೀಕ್ಷೆಗೊಳಪಡಿಸುತ್ತಿದ್ದಾರೆ.

ಪ್ರಕರಣ ಸದನದಲ್ಲೂ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ದೇಶ ದ್ರೋಹಿಗಳಿಗೆ ಕಾಂಗ್ರೆಸ್ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದರೆ ಕಾಂಗ್ರೆಸ್ ಇದೆಲ್ಲಾ ಬಿಜೆಪಿಯ ಕಲ್ಪಿತ ವಿಚಾರಗಳು ಎಂದು ತಿರುಗೇಟು ನೀಡಿದೆ. ಇಂದೂ ಕೂಡಾ ಸದನದಲ್ಲಿ ಈ ವಿಚಾರ ಸದ್ದು ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ