ಕರ್ನಾಟಕ – ತೆಲಂಗಾಣ ಗಡಿ ಸಮಸ್ಯೆ ಬಗೆಹರಿದದ್ದು ಹೇಗೆ ಗೊತ್ತಾ?
ಶನಿವಾರ, 22 ಡಿಸೆಂಬರ್ 2018 (13:08 IST)
ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ ಗಡಿ ಸಮಸ್ಯೆಯನ್ನು ಬಗೆ ಹರಿಸಲು ಉಭಯ ರಾಜ್ಯಗಳ ಜಿಲ್ಲಾಧಿಕಾರಿಗಳು ಮಹತ್ವದ ಒಪ್ಪಂದಕ್ಕೆ ಹಾಗೂ ನಿರ್ಣಯಕ್ಕೆ ಬಂದಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋತಂಗಲ್ ಗ್ರಾಮದ ಹತ್ತಿರ ಉದ್ಭವಿಸಿರುವ ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ ಗಡಿ ಸಮಸ್ಯೆಯನ್ನು ಬಗೆ ಹರಿಸಲು ರಾಜ್ಯಗಳನ್ನು ವಿಭಜಿಸುವ ಕಾಗಿಣಾ ನದಿಯ ಮಧ್ಯಭಾಗದಿಂದ ರಾಜ್ಯದ ಗಡಿ ಗುರುತಿಸುವಂತೆ ಜಿಲ್ಲಾಧಿಕಾರಿಗಳು ನಿರ್ಣಯಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹಾಗೂ ತೆಲಂಗಾಣ ರಾಜ್ಯದ ವಿಕಾರಾಬಾದ ಜಿಲ್ಲೆಯ ಜಿಲ್ಲಾಧಿಕಾರಿ ಸೈಯದ್ ಓಮರ್ ಜಲೀಲ ಅವರು ಜಂಟಿಯಾಗಿ ಉಭಯ ಜಿಲ್ಲೆಗಳ ಕಂದಾಯ, ಭೂದಾಖಲೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಚಿಂಚೋಳಿ ತಾಲೂಕಿನ ಪೋತಂಗಲ್ ಗ್ರಾಮದ ಹತ್ತಿರ ಕಾಗಿಣಾ ನದಿಯ ದಂಡೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡರು.
ಕಲಬುರಗಿ ಜಿಲ್ಲಾಧಿಕಾರಿಗಳು 1913 ರಲ್ಲಿ ರೂಪಿಸಲಾಗಿರುವ ನಕಾಶೆಯೊಂದಿಗೆ ವಿಕಾರಾಬಾದ ಜಿಲ್ಲಾಧಿಕಾರಿಗಳ ಹತ್ತಿರದ 1940 ರ ನಕಾಶೆಯೊಂದಿಗೆ ರಾಜ್ಯಗಳ ಗಡಿಭಾಗವನ್ನು ತಾಳೆಮಾಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, 1913 ರಲ್ಲಿ ರಚಿಸಲಾಗಿರುವ ಭೂದಾಖಲೆಗಳ ಪ್ರಕಾರ ಸಧ್ಯ ತೆಲಂಗಾಣ ರಾಜ್ಯದ ವಿಕಾರಾಬಾದದ ತಾಂಡೂರ ತಾಲೂಕು ಕಲಬುರಗಿ ಜಿಲ್ಲೆಯ ಭಾಗವಾಗಿತ್ತು. ರಾಜ್ಯಗಳು ವಿಭಜನೆಯಾದ ನಂತರ ಕಲಬುರಗಿ ಜಿಲ್ಲೆಯಲ್ಲಿರುವ ಭೂದಾಖಲೆಗಳ ಟಿಪ್ಪಣಿಗಳ ಪ್ರಕಾರ ಸರ್ವೇ ಮಾಡಿಸಲಾಗಿದೆ. ಅದರಂತೆ ಕರ್ನಾಟಕ ರಾಜ್ಯದ ಗಡಿಭಾಗವು ಕಾಗಿಣಾ ನದಿಯ ಮಧ್ಯದವರೆಗೆ ಇದ್ದು, ಗಡಿ ಗುರುತಿಸಿ ನದಿಯಲ್ಲಿ ಗಡಿಯ ಕಲ್ಲುಗಳನ್ನು ಸಹ ಅಳವಡಿಸಲಾಗಿದೆ ಎಂದು ವಿವರಿಸಿದರು.