ಮಂಗಳೂರು: ಕರ್ನಾಟಕದಲ್ಲಿ ಈ ಬಾರಿ ಬೇಗನೇ ಮುಂಗಾರು ಆಗಮನವಾಗಿದ್ದು, ಈಗ ಕರಾವಳಿ ಜಿಲ್ಲೆಗಳಲ್ಲಂತೂ ವಿಪರೀತ ಮಳೆಯಾಗುತ್ತಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಆತಂಕ ಶುರುವಾಗಿದೆ.
ರೈತರಿಗೆ ಮಳೆ ಅನುಕೂಲ ಹಾಗೂ ಅನಾನುಕೂಲ ಎರಡನ್ನೂ ಸೃಷ್ಟಿಸುತ್ತದೆ. ಈ ಬಾರಿ ಬೇಸಿಗೆಯಲ್ಲಿ ಮಳೆಯಾಗುತ್ತಿದ್ದಿದ್ದರಿಂದ ಅಡಿಕೆ ಬೆಳೆಗಾರರಿಗೆ ಕೊಂಚ ನೆಮ್ಮದಿಯಾಗಿತ್ತು. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗಿಲ್ಲ ಎನ್ನುವುದು ಸಮಾಧಾನಕರ ಅಂಶ.
ಈಗ ಮೇ ಕೊನೆಯ ವಾರದಲ್ಲೂ ಉತ್ತಮ ಮಳೆಯಾಗುತ್ತಿರುವುದು ಶುಭ ಸೂಚನೆಯೇ. ಆದರೆ ಈ ಮಳೆ ಎರಡು ವಾರಗಳಿಗೂ ಹೆಚ್ಚು ಮುಂದುವರಿದರೆ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೊಳೆ ರೋಗದಂತಹ ಸಮಸ್ಯೆಗಳು ಬರಲಿದೆ.
ಹೀಗಾಗಿ ಈಗ ಒಂದು ವಾರ ಧಾರಾಕಾರ ಮಳೆಯಾದರೂ ಅಡಿಕೆಗೆ ಅನುಕೂಲವೇ. ಆದರೆ ಅದು ಬಳಿಕವೂ ಬಿಟ್ಟೂ ಬಿಡದೇ ಮುಂದುವರಿದರೆ ರೋಗ ಉಂಟಾದೀತು. ಬಳಿಕ ರೋಗಕ್ಕೆ ಮದ್ದು ಹಾಯಿಸುವಷ್ಟೂ ಬಿಸಿಲು ಬಾರದೇ ಹೋದಲ್ಲಿ ಅಡಿಕೆ ಬೆಳೆ ನಷ್ಟವಾಗಬಹುದು. ಇದರಿಂದ ಮೊದಲೇ ಬೆಳೆ ಕಡಿಮೆ ಎಂಬ ಆತಂಕದಲ್ಲಿರುವ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.