ಬೆಂಗಳೂರು: ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಮೊದಲೇ ಬಂದಿದೆ, ಹೀಗಾಗಿ ಈ ಬಾರಿ ನೀರಿಗೇನೂ ಕೊರತೆಯಾಗದು ಎಂದು ಖುಷಿಯಾಗಿದ್ದರೆ ಈ ಹವಾಮಾನ ವರದಿಯನ್ನು ಒಮ್ಮೆ ನೋಡಿ.
ಹವಾಮಾನ ವರದಿಗಳ ಪ್ರಕಾರ ಈ ಬಾರಿ ಬೇಗನೇ ಮುಂಗಾರು ಆಗಮನವಾಗಲಿದೆ ಎಂದಿತ್ತು. ಅದರಂತೆ ಮೇ ಕೊನೆಯ ವಾರದಲ್ಲೇ ಕೇರಳಕ್ಕೆ ಮುಂಗಾರು ಪ್ರವೇಶಿಸಿ, ದೇಶದಾದ್ಯಂತ ಅಬ್ಬರಿಸುತ್ತಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಂತೂ ಮಳೆ ರುದ್ರ ನರ್ತನ ಮಾಡಿತ್ತು.
ಹೀಗಾಗಿ ಈ ಬಾರಿ ನೆರೆಯುಂಟಾಗಬಹುದು, ಇನ್ನು ಸೆಪ್ಟೆಂಬರ್ ವರೆಗೂ ಎಡೆಬಿಡದೇ ಮಳೆಯಾಗಬಹುದು ಎಂದು ನೀವು ಅಂದುಕೊಂಡಿರಬಹುದು. ಆದರೆ ಹವಾಮಾನ ತಜ್ಞರ ಲೇಟೆಸ್ಟ್ ಮಾಹಿತಿ ಪ್ರಕಾರ ಈ ಬಾರಿ ಮುಂಗಾರು ಬೇಗನೇ ಬಂದಿರುವುದಕ್ಕೆ ಮುಖ್ಯ ಕಾರಣ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತ.
ಇದರ ಪರಿಣಾಮವಾಗಿ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ಜೂನ್ 2 ರವರೆಗೂ ಮುಂಗಾರು ಮಳೆಯ ಅಬ್ಬರ ಮುಂದುವರಿಯಲಿದೆ. ಆದರೆ ಅದಾದ ಬಳಿಕ 15 ದಿನಗಳಿಗೆ ವರುಣ ಬಿಡುವು ನೀಡಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಸತತವಾಗಿ ಮಳೆಯಾಗುವ ಸಾಧ್ಯತೆಯಿಲ್ಲ. ಸಾಮಾನ್ಯವಾಗಿ ಜೂನ್ 1 ಕ್ಕೆ ಆರಂಭವಾಗುವ ಮುಂಗಾರು ಜೂನ್ ಮಧ್ಯ ಭಾಗದವರೆಗೂ ನಿರಂತರವಾಗಿ ಸುರಿಯುತ್ತದೆ. ಆದರೆ ಈ ಬಾರಿ ಬೇಗನೇ ಮುಂಗಾರು ಆಗಮನವಾಗಿದ್ದು, ಜೂನ್ ಆರಂಭದಲ್ಲಿಯೇ ಬಿಡುವು ಪಡೆದುಕೊಳ್ಳಲಿದೆ. ನಂತರ ಜೂನ್ ಕೊನೆಯ ವಾರದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.