ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ನಿರೀಕ್ಷೆಯಂತೇ ಭಾರೀ ಮಳೆಯಾಗುತ್ತಿದೆ. ಆದರೆ ಒಂದೇ ಮಳೆಗೆ ರಸ್ತೆಗಳು ಜಲಾವೃತವಾಗಿದೆ.
ಇಂದು ಅಪರಾಹ್ನ 4 ಗಂಟೆಯಿಂದ ಮಳೆ ಸುರಿಯಲು ಆರಂಭವಾಗಿದೆ. ಹೆಬ್ಬಾಳ, ಕೆಆರ್ ಪುರಂ, ಯಲಹಂಕ, ಮೆಜೆಸ್ಟಿಕ್ ಸೇರಿದಂತೆ ಬಹುತೇಕ ಕಡೆ ಭಾರೀ ಮಳೆಯಾಗುತ್ತಿದೆ. ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಗೆ ಜನ ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿಯಾಗಿದೆ.
ಇನ್ನು, ಒಂದೇ ಒಂದು ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತವಾಗಿದೆ. ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವ ಸ್ಥಿತಿಯಾಗಿದೆ. ಹೆಬ್ಬಾಳದಿಂದ ಕೆಆರ್ ಪುರಂವರೆಗಿನ ರಿಂಗ್ ರೋಡ್ ನಲ್ಲಿ ಅಲ್ಲಲ್ಲಿ ಮಳೆ ನೀರು ರಸ್ತೆಯಲ್ಲೇ ನಿಂತಿದ್ದು, ವಾಹನ ಚಾಲನೆ ಕಷ್ಟವಾಗಿದೆ.
ಸತತ ಒಂದು ಗಂಟೆಯಿಂದ ಮಳೆ ಸುರಿಯುತ್ತಿದ್ದು, ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಇದ್ದಕ್ಕಿದ್ದಂತೆ ಸುರಿದ ಬೇಸಿಗೆ ಮಳೆಯಿಂದ ಜನರು ಪರದಾಡುವಂತಾಗಿದೆ. ಆದರೆ ಸತತ ಬಿಸಿಲಿನಿಂದ ತತ್ತರಿಸಿದ್ದ ಬೆಂಗಳೂರಿಗೆ ಈ ಮಳೆ ತಂಪೆರಚಿದೆ.