ಬೆಂಗಳೂರು: ಸತತ ಬಿಸಿಲಿನಿಂದ ಕಂಗೆಟ್ಟಿದ್ದ, ಮಳೆಗಾಗಿ ಕಾಯುತ್ತಿದ್ದ ಬೆಂಗಳೂರಿಗರಿಗೆ ಇದೀಗ ಗುಡ್ ನ್ಯೂಸ್. ಇಂದಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ವಾರ ಆರಂಭದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಒಂದೆರಡು ಮಳೆಯಾಗಿದೆ. ಆದರೆ ಬೆಂಗಳೂರಿಗೆ ಒಂದು ಬಾರಿ ಮಾತ್ರ ತುಂತುರು ಮಳೆಯಾಗಿದ್ದು ಬಿಟ್ಟರೆ ಬಿಸಿಲಿನ ವಾತಾವರಣವಿದೆ.
ಇದೀಗ ರಾಜ್ಯ ರಾಜಧಾನಿ ಬೆಂಗಳೂರಿಗೆ ಇಂದಿನಿಂದ ಸತತ ಮೂರು-ನಾಲ್ಕು ದಿನಗಳ ಕಾಲ ಮಳೆಯಾಗುವ ಸೂಚನೆಯಿದೆ. ಇದೀಗ 33 ಡಿಗ್ರಿಯ ಆಸುಪಾಸು ತಾಪಮಾನ ಹೊಂದಿರುವ ಬೆಂಗಳೂರಿನಲ್ಲಿ ಮಳೆಯಿಂದಾಗಿ ತಾಪಮಾನ 29 ಡಿಗ್ರಿಯವರೆಗೆ ತಲುಪುವ ನಿರೀಕ್ಷೆಯಿದೆ.
ಇನ್ನು, ಕೇವಲ ಬೆಂಗಳೂರು ಮಾತ್ರವಲ್ಲ, ರಾಜ್ಯದ ಬೇರೆ ಜಿಲ್ಲೆಗಳಿಗೂ ಮಳೆಯ ಸೂಚನೆಯಿದೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ಇಂದು ಮತ್ತು ನಾಳೆ ಮಳೆಯಾಗುವ ಸೂಚನೆಯಿದೆ.